ಚಾಮರಾಜನಗರ: ವಿಶ್ವ ವಿಖ್ಯಾತ ಮೈಸೂರು ದಸರಾ ಭಾಗವಾಗಿ ಚಾಮರಾಜನಗರ ಜಿಲ್ಲೆಯಲ್ಲಿಯೂ ಇದೇ ಅ.17 ರಿಂದ 20ರವರೆಗೆ ನಾಲ್ಕು ದಿನಗಳ ಕಾಲ ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವನ್ನು ಆಯೋಜಿಸಲಾಗಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ ಚಾಮರಾಜನಗರ ದಸರಾ ಮಹೋತ್ಸವ ಕುರಿತು ವಿವರ ನೀಡಿದರು.
ಚಾಮರಾಜನಗರ ದಸರಾ ಮಹೋತ್ಸವ ಅಂಗವಾಗಿ ನಗರದ ಶ್ರೀ ಚಾಮರಾಜೇಶ್ವಸ್ವಾಮಿ ದೇವಾಲಯ ಮುಂಭಾಗದ ಪ್ರಧಾನ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ದಸರಾ ಕವಿಗೋಷ್ಠಿ, ಪೌರಾಣಿಕ, ಸಾಮಾಜಿಕ ನಾಟಕಗಳ ಪ್ರದರ್ಶನ ಇರಲಿವೆ. ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಜಿಲ್ಲೆಯ ವಿವಿಧ ಮಹಿಳಾ ಸಂಘ ಸಂಸ್ಥೆಗಳು, ಗಿರಿಜನ ಹಾಡಿಗಳಿಂದ ತಯಾರಾಗಿರುವ ಅರಣ್ಯ ಉತ್ಪನ್ನಗಳು, ವಿವಿಧ ಆಹಾರ ಉತ್ಪನ್ನಗಳು, ಕಸೂತಿ, ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಏರ್ಪಾಡಾಗಿದೆ. ರೈತ ದಸರಾ, ಮಹಿಳಾ ದಸರಾ, ಮ್ಯಾರಾಥಾನ್, ಚಾಮುಂಡೇಶ್ವರಿ ವಿಗ್ರಹದೊಂದಿಗೆ ಕಲಾತಂಡಗಳು ಹಾಗೂ ಸ್ತಬ್ಧಚಿತ್ರಗಳ ಮೆರವಣಿಗೆ ಸೇರಿದಂತೆ ಇತರೆ ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ.
ಅ.17ರಂದು ಬೆಳಿಗ್ಗೆ 10.15 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಸಾಂಪ್ರಾದಾಯಿಕವಾಗಿ ದಸರಾಗೆ ಚಾಲನೆ ನೀಡಲಾಗುವುದು. ನಂತರ ಶ್ರೀ ಭುವನೇಶ್ವರಿ ತಾಯಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು. ಬಳಿಕ ಚಾಮರಾಜೇಶ್ವರ ಉದ್ಯಾನವನದ ಆವರಣದಲ್ಲಿ ಜಿಲ್ಲೆಯ ಚಿತ್ರಕಲಾವಿದರಿಂದ ಸ್ಥಳದಲ್ಲಿ ಚಿತ್ರಕಲೆ ಬಿಡಿಸುವ ಮೂಲಕ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. 11 ಗಂಟೆಗೆ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲೆಯ ಕವಿಗಳಿಂದ ಕವಿಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 11.15 ಗಂಟೆಗೆ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಮಹಿಳೆಯರಿಂದ ತಯಾರಿಸಿದ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಅ. 17ರಂದು ಮಧ್ಯಾಹ್ನ 2.30 ಗಂಟೆಗೆ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಶ್ರೀ ಚಾಮುಂಡೇಶ್ವರಿ ವಿಗ್ರಹದೊಂದಿಗೆ ದಸರಾ ಮೆರವಣಿಗೆಗೆ ಜಿಲ್ಲೆಯ ವಿವಿಧ ಕಲಾತಂಡಗಳು, ವಿವಿಧ ಇಲಾಖೆಗಳ ಸ್ಥಬ್ದಚಿತ್ರಗಳ (ಟ್ಯಾಬ್ಲೋ) ಪ್ರದರ್ಶನದ ಮೂಲಕ ಚಾಲನೆ ನೀಡಲಾಗುವುದು. ಸಂಜೆ 5.30 ಗಂಟೆಗೆ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದ ಪ್ರಧಾನ ವೇದಿಕೆಯಲ್ಲಿ ವಿದ್ಯುಕ್ತವಾಗಿ ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆಯಾಗಲಿದೆ. ಈ ವೇದಿಕೆಯಲ್ಲಿಯೇ ಪ್ರಮುಖ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲಾಗಿದ್ದು ವಿಶೇಷವಾಗಿ ಸ್ಥಳೀಯ ಕಲಾವಿದರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು.
ಅ. 18ರಂದು ಬೆಳಿಗ್ಗೆ 6.30 ಗಂಟೆಗೆ ಚಾಮರಾಜೇಶ್ವರಸ್ವಾಮಿ ದೇವಾಲಯ ಮುಂಭಾಗ ದಸರಾ ಮ್ಯಾರಥಾನ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು, ಹಿರಿಯರು, ಸಾರ್ವಜನಿಕರು, ಅಧಿಕಾರಿಗಳು, ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಚಾಮರಾಜೇಶ್ವರ ದೇವಾಲಯದಿಂದ ಹೊರಟು ನಗರದ ಪ್ರಮುಖ ಮಾರ್ಗಗಳಲ್ಲಿ ಸಾಗಿ ಪ್ರವಾಸಿ ಮಂದಿರದಲ್ಲಿ ಮ್ಯಾರಥಾನ್ ಕೊನೆಗೊಳ್ಳಲಿದೆ. 10.30 ಗಂಟೆಗೆ ಮಹಿಳಾ ದಸರಾ ಕಾರ್ಯಕ್ರಮ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ನಡೆಯಲಿದೆ. 11 ಗಂಟೆಗೆ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ನಾಟಕೋತ್ಸವ ಕಾರ್ಯಕ್ರಮವನ್ನು ಜಿಲ್ಲೆಯ ರಂಗಭೂಮಿ ಕಲಾವಿದರಿಂದ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಅ. 19ರಂದು ಬೆಳಿಗ್ಗೆ 10 ಗಂಟೆಗೆ ರೈತ ದಸರಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಎತ್ತಿನಗಾಡಿ ಹಾಗೂ ಕಲಾತಂಡಗಳ ಮೆರವಣಿಗೆಯು ಚಾಮರಾಜೇಶ್ವರಸ್ವಾಮಿ ದೇವಸ್ಥಾನದಿಂದ ಹೊರಟು ಬಿ. ರಾಚಯ್ಯ ಜೋಡಿರಸ್ತೆ ಮೂಲಕ ಸಾಗಿ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕೊನೆಗೊಳ್ಳಲಿದೆ. ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರೈತ ದಸರಾ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ಪ್ರಗತಿಪರ ರೈತರಿಂದ ಸಂವಾದ, ಚಿಂತನಾ ಮಂಥನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ಅ. 20ರಂದು ಸಂಜೆ 7ಗಂಟೆಗೆ ದಸರಾ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. ಅಕ್ಟೋಬರ್ 17ರಿಂದ 20ರವರೆಗೆ ಮಧ್ಯಾಹ್ನ 2ರಿಂದ ರಾತ್ರಿ 9.45 ಗಂಟೆಯವರೆಗೆ ಮುಖ್ಯವೇದಿಕೆಯಲ್ಲಿ ಸುಗಮ ಸಂಗೀತ, ಜನಪದ ಸಂಗೀತ, ಕನ್ನಡ ಗೀತೆಗಳ ಗಾಯನ, ತಂಬೂರಿ ಪದ, ನೀಲಗಾರರ ಪದ, ವಚನ ಗಾಯನ, ಭಜನೆ, ತತ್ವಪದ, ಸೋಬಾನೆ ಪದ, ನೃತ್ಯ ರೂಪಕ, ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಚಾಮರಾಜೇಶ್ವರಸ್ವಾಮಿ ದೇವಸ್ಥಾನ, ಜಿಲ್ಲಾಡಳಿತ ಭವನ, ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರ, ವಿವಿಧ ಸರ್ಕಾರಿ ಕಟ್ಟಡಗಳು, ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ದೀಪಾಲಂಕಾರ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಅವಿಭಜಿತ ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ 1997ರಲ್ಲಿ ಪ್ರತ್ಯೇಕ ಜಿಲ್ಲೆಯಾದ ಬಳಿಕ ಮೊದಲ ಬಾರಿಗೆ 2013ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರ ನೇತೃತ್ವದ ಸರ್ಕಾರ ಪಾರಂಪರಿಕ ಮೈಸೂರು ದಸರಾವನ್ನು ಚಾಮರಾಜನಗರ ಜಿಲ್ಲೆಗೂ ವಿಸ್ತರಿಸಿತು. ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹೆಚ್.ಎಸ್. ಮಹದೇವಪ್ರಸಾದ್ ಅವರ ಕಾಳಜಿಯಿಂದಾಗಿ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯಲ್ಲೂ 2013ರಲ್ಲಿ ದಸರಾ ಆಚರಣೆ ಪ್ರಾರಂಭವಾಯಿತು ಎಂದರು.
ಜಿಲ್ಲೆಯಲ್ಲಿ 2015ರಲ್ಲಿ ಉಂಟಾದ ಪ್ರವಾಹದ ಹಿನ್ನೆಲೆಯಲ್ಲಿ ದಸರಾ ಆಚರಣೆ ನಡೆದಿರಲಿಲ್ಲ. ಉಳಿದಂತೆ 2013ರಿಂದ 2022ರವರೆಗೆ ದಸರಾವನ್ನು ಜಿಲ್ಲೆಯಲ್ಲಿ ಆಯೋಜಿಸಲಾಗಿದೆ. 2020 ಹಾಗೂ 2021ರಲ್ಲಿ ಕೋವಿಡ್ ಕಾರಣದಿಂದ ದಸರಾವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಚಾಮರಾಜನಗರ ದಸರಾಗೆ ದಶಕದ ಸಂಭ್ರಮವಾಗಿದೆ. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ವರ್ಷದ ಚಾಮರಾಜನಗರ ದಸರಾ ಮಹೋತ್ಸವವನ್ನು ಸರಳವು ಅಲ್ಲದ, ಅದ್ದೂರಿಯೂ ಅಲ್ಲದ ಸಾಂಪ್ರದಾಯಿಕ ದಸರಾ ನಡೆಸಲಾಗುತ್ತಿದೆ ಎಂದು ಶಾಸಕರಾದ ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎ. ರಮೇಶ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಲಿಂಗಯ್ಯ ಪತ್ರಿಕಾಗೋಷ್ಠಿಯಲ್ಲಿ ಇದ್ದರು.