ಬೆಂಗಳೂರು : ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬಡ ಕುಟುಂಬಗಳಿಗೆ ‘ಸರ್ವರಿಗೂ ಸೂರು’ ಯೋಜನೆಯಡಿ ನಿರ್ಮಿಸಲಾಗುತ್ತಿರುವ 1.82 ಲಕ್ಷ ಮನೆಗಳ ಪೈಕಿ ಎರಡನೇ ಹಂತದಲ್ಲಿ 42,345 ಮನೆಗಳನ್ನು ಎ.27ರಂದು ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿರುವ ಕೊಳಗೇರಿ ಅಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ಈ ಸಂಬಂಧ ಪೂರ್ವಬಾವಿ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಮೊದಲ ಹಂತದಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ 36,789 ಮನೆ ಹಂಚಿಕೆ ಮಾಡಲಾಗಿತ್ತು. ಇದೀಗ ಎರಡನೇ ಹಂತದಲ್ಲಿ ಎ.27ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 42,345 ಮನೆ ಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಸೇರಿದಂತೆ ಹಲವು ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯಮಂತ್ರಿ ಹಂಚಿಕೆ ಮಾಡಲಿರುವ ಮನೆಗಳನ್ನು ಮೂಲಭೂತ ಸೌಕರ್ಯ ಸಹಿತ ಒಂದು ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
2013 ರಿಂದ 2023 ರವರೆಗೆ ಬಡ ಕುಟುಂಬಗಳಿಗೆ 1.82 ಲಕ್ಷ ಮನೆ ನಿರ್ಮಾಣ ಯೋಜನೆ ರೂಪಿಸಲಾಗಿತ್ತು. ಫಲಾನುಭವಿಗಳ ವಂತಿಗೆ ಪಾವತಿ ಕಷ್ಟವಾಗಿ ಮನೆಗಳು ಅರ್ಧ ಕ್ಕೆ ನಿಂತಿದ್ದವು. ಮುಖ್ಯಮಂತ್ರಿಗೆ ಸಮಸ್ಯೆ ಮನವರಿಕೆ ಮಾಡಿಕೊಟ್ಟು ಫಲಾನುಭವಿಗಳ ವಂತಿಗೆ ತಲಾ ನಾಲ್ಕು ಲಕ್ಷ ರೂ. ಸರಕಾರವೇ ಭರಿಸುವ ತೀರ್ಮಾನ ಕೈಗೊಂಡು ಮನೆ ಪೂರ್ಣ ಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಡಾ.ಅಶೋಕ್, ತಾಂತ್ರಿಕ ಸಲಹೆಗಾರ ಬಾಲರಾಜ್, ಪ್ರಧಾನ ಅಭಿಯಂತರ ಸುಧೀರ್, ನಿರ್ದೇಶಕರಾದ ವೆಂಕಟೇಶ್, ವಿನಯ್ ಕುಮಾರ್, ರಶೀದ್ ಉಪಸ್ಥಿತರಿದ್ದರು.