ಗುಂಡ್ಲುಪೇಟೆ: ಡೆತ್ ನೋಟ್ ಬರೆದಿಟ್ಟು ಬಿಲ್ ಕಲೆಕ್ಟರ್ ವೊಬ್ಬರು ಗ್ರಾಪಂನಲ್ಲೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ಕೂತನೂರು ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದಿದೆ.
ಕೂತನೂರು ಗ್ರಾಮದ ಸುರೇಶ್(34) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಗ್ರಾಮ ಪಂಚಾಯಿತಿ ಆಡಳಿತ ಮತ್ತು ಅಧಿಕಾರಿ, ನೌಕರರ ನಡುವೆ ಹಿಂದೆ ಗಲಾಟೆ ನಡೆದಿತ್ತು. ಈ ವಿಷಯವಾಗಿ ನಿರ್ಣಯ ಕೈಗೊಳ್ಳುವ ಸಂಬಂಧ ಶುಕ್ರವಾರ ಗ್ರಾಮ ಪಂಚಾಯಿತಿಯಲ್ಲಿ ಸಭೆ ಆಯೋಜನೆ ಮಾಡಲಾಗಿತ್ತು. ಈ ವೇಳೆ ಅಭಿವೃದ್ಧಿ ಅಧಿಕಾರಿ ಮತ್ತು ಬಿಲ್ ಕಲೆಕ್ಟರ್ ನಡವಳಿಕೆಗಳ ಬಗ್ಗೆ ವಿಷಯ ಚರ್ಚೆಗೆ ಬಂದಿತೆಂದು ಹೇಳಲಾಗಿದೆ. ಸಭೆ ನಡೆಯುತ್ತಿರುವಾಗಲೇ ಹೊರ ಬಂದ ಬಿಲ್ ಕಲೆಕ್ಟರ್ ಸುರೇಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷಯ ತಿಳಿದು ಇವರನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ಕೇಸು ದಾಖಲಾಗಿಲ್ಲ.
ಡೆತ್ ನೋಟ್‍ನಲ್ಲಿ ಏನಿದೆ: ತನ್ನ ಸಾವಿಗೆ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಮತ್ತು ಉಪಾಧ್ಯಕ್ಷರ ಪುತ್ರ ಕಾರಣ. ಇವರು ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ನನ್ನನ್ನು ಕೆಲಸದಿಂದ ವಜಾ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಹಿಂದೆಯೂ ಇವರಿಂದ ನನಗೆ ಕಿರುಕುಳವಾಗಿದೆ. ಈ ಕಾರಣ ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ. ನನ್ನ ಮಗು ಮತ್ತು ಪತ್ನಿಗೆ ನ್ಯಾಯ ಒದಗಿಸಿ ಎಂದು ಸುರೇಶ್ ಡೆತ್ ನೋಟ್‍ನಲ್ಲಿ ಬರೆದಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ತಾ.ಪಂ ಇಒ ಶ್ರೀಕಂಠರಾಜೇಅರಸ್ ಗ್ರಾಮ ಪಂಚಾಯಿತಿಗೆ ಬೇಟಿ ನೀಡಿದ್ದರು. ಈ ವೇಳೆ ಗ್ರಾಮ ಪಂಚಾಯಿತಿ ಸಭೆಯಲ್ಲಿ ಬಿಲ್ ಕಲೆಕ್ಟರ್ ಗೆ ಯಾವುದೇ ಕಿರುಕುಳ ನೀಡಿಲ್ಲದಿರುವ ಬಗ್ಗೆ ಮತ್ತು ಹಿಂದೆ ಅಧಿಕಾರಿ, ನೌಕರರ ದುರ್ವರ್ತನೆ ತೋರಿದ ಬಗ್ಗೆ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಕಳುಹಿಸುವುದಾಗಿ ತಿಳಿಸಿದರು ಎಂದು ತಿಳಿದು ಬಂದಿದೆ.