ಬೆಂಗಳೂರು: ಪತ್ನಿಯನ್ನು ತನ್ನೊಂದಿಗೆ ಒಂದು ರಾತ್ರಿ ಕಳುಹಿಸಿಕೊಂಡು ಎಂದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಕಾರಿನಲ್ಲಿ 14 ಬಾರಿ ಇರಿದು ಕೊಲೆಗೈದಿದ್ದ ಬಟ್ಟೆ ವ್ಯಾಪಾರಿಯನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಾಸರಹಳ್ಳಿ ಮರಿಯಣ್ಣಪಾಳ್ಯ ನಿವಾಸಿ ಸಂತೋಷ್ ಕುಮಾರ್(39) ಬಂಧಿತ ಆರೋಪಿ. ಮಾ.12ರಂದು ಈತ ಮಾರುತಿನಗರ ನಿವಾಸಿ ಕೃಷ್ಣಯಾದವ್(55) ಎಂಬಾತನನ್ನು ಕೊಲೆಗೈದು, ಮೃತದೇಹವನ್ನು ಕಾರಿನಲ್ಲಿ ಇರಿಸಿ ಪರಾರಿಯಾಗಿದ್ದ.
ಆಂಧ್ರಪ್ರದೇಶ ಮೂಲದ ಕೃಷ್ಣಯಾದವ್ ನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ. ಈತನ ಸ್ನೇಹಿತ ತಮಿಳುನಾಡು ಮೂಲದ ಸಂತೋಷ್ ಮೊಬೈಲ್ ಅಂಗಡಿ ಮುಂಭಾಗದ ಫುಟ್ ಪಾತ್ ನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ. ಒಂದೆರಡು ಬಾರಿ ಆರೋಪಿಯ ಅಂಗಡಿಯಲ್ಲಿ ಬಟ್ಟೆ ಖರೀದಿಸಿದ್ದ ಕೃಷ್ಣಯಾದವ್, “ಉತ್ತಮ ಗುಣಮಟ್ಟದ ಬಟ್ಟೆ ಮಾರಾಟ ಮಾಡುತ್ತಿಯಾ, ಹೊಸ ಬಟ್ಟೆ ಅಂಗಡಿಗೆ ನಾನು ಹಣ ಹೂಡಿಕೆ ಮಾಡುತ್ತೇನೆ” ಎಂದು ಭರವಸೆ ನೀಡಿದ್ದ. ಆದರೆ, ನಾಲ್ಕೈದು ತಿಂಗಳಾದರೂ ಹಣ ಹೂಡಿಕೆ ಮಾಡಿರಲಿಲ್ಲ.
ಈ ಮಧ್ಯೆ ಉದ್ಯಮಿ ಕೃಷ್ಣಯಾದವ್ ಗೆ ಹೆಣ್ಣಿನ ಮೇಲೆ ಹೆಚ್ಚಿನ ವ್ಯಾಮೋಹ ಇತ್ತು ಎಂದು ಹೇಳಲಾಗಿದೆ. ಮಾ.11ರಂದು ಆರೋಪಿ ಸಂತೋಷ್ ಜತೆ ಕಾರಿನಲ್ಲಿ ಯಲಹಂಕದ ಬಾರ್‌ನಲ್ಲಿ ಮದ್ಯ ಸೇವಿಸಿ ವಿವಿಧೆಡೆ ಸುತ್ತಾಡಿದ್ದ ಕೃಷ್ಣಯಾದವ್‌ಗೆ ಆರೋಪಿ ಸಂತೋಷ್ ಕುಮಾರ್, ತನ್ನ ಮೊಬೈಲ್ ನಲ್ಲಿದ್ದ 2ನೇ ಪತ್ನಿಯ ಫೋಟೋವನ್ನು ತೋರಿಸಿದ್ದಾನೆ. ಅದರಿಂದ ವ್ಯಾಮೋಹಕ್ಕೊಳಗಾದ ಕೃಷ್ಣಯಾದವ್, “ಬಟ್ಟೆ ಅಂಗಡಿಗೆ ಒಂದೆರಡು ದಿನದಲ್ಲೇ ಲಕ್ಷಾಂತರ ರೂ. ಹೂಡಿಕೆ ಮಾಡುತ್ತೇನೆ. ಇಂದು ರಾತ್ರಿ ನಿನ್ನ ಪತ್ನಿಯನ್ನು ನನ್ನೊಂದಿಗೆ ಕಳುಹಿಸು’ ಎಂದು ಕೇಳಿದ್ದಾನೆ. ಅದರಿಂದ ಕೋಪಗೊಂಡು ಆರೋಪಿ, ಉದ್ಯಮಿ ಕೃಷ್ಣಯಾದವ್ ಜತೆ ಜಗಳ ಆರಂಭಿಸಿದ್ದಾನೆ. ಅದು ವಿಕೋಪಕ್ಕೆ ಹೋದಾಗ ಆರೋಪಿ ಕಾರಿನಲ್ಲಿದ್ದ ಚಾಕುವಿನಿಂದ ಕೃಷ್ಣಯಾದವ್ ನ ದೇಹದ ವಿವಿಧೆಡೆ 14 ಬಾರಿ ಇರಿದು ಪರಾರಿಯಾಗಿದ್ದ. ಇತ್ತ ಕೃಷ್ಣಯಾದವ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದ. ಬಳಿಕ ಪ್ರಕರಣ ದಾಖಲಿಸಿಕೊಂಡು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಈ ಸಂಬಂಧ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.