ಯಾದಗಿರಿ: ಪಿಎಸ್‌ಐ ಪರೀಕ್ಷಾ ಹಗರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಈಗ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಇಂದು ರಾಜ್ಯಾದ್ಯಂತ ಕೆಪಿಎಸ್‌ಸಿಯ ವಿವಿಧ ಇಲಾಖೆಗಳ ಪರೀಕ್ಷೆ ನಡೆಯುತ್ತಿದೆ. ಯಾದಗಿರಿಯಲ್ಲಿ ನಡೆದ ಪರೀಕ್ಷೆಯಲ್ಲಿ ಓರ್ವ ಅಭ್ಯರ್ಥಿ ಬ್ಲೂಟೂತ್ ಬಳಕೆ ಮಾಡಿ ಪರೀಕ್ಷೆ ಬರೆದಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಕಲು ಅಭ್ಯರ್ಥಿಯೇ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಬಂದಿದ್ದಾಗಿ ಮಾಹಿತಿ ಸಿಕ್ಕಿದೆ. ಪೊಲೀಸರು ಅಭ್ಯರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸೀನಿಯರ್ ಅಸಿಸ್ಟೆಂಟ್ ಹುದ್ದೆ, ಫುಡ್ ಕ್ಯಾಟಗೇರಿಜೇಷನ್ ಸಿಸ್ಟಮ್ ನ ಸೀನಿಯರ್ ಅಸಿಸ್ಟೆಂಟ್ ಸೇರಿ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಹುದ್ದೆ ಭರ್ತಿಗಾಗಿ ಪರೀಕ್ಷೆ ನಡೆಯುತ್ತಿದ್ದು ಯಾದಗಿರಿ ಜಿಲ್ಲೆಯ ೧೭ ಪರೀಕ್ಷಾ ಕೇಂದ್ರಗಳಲ್ಲಿ ೭,೮೮೪ ಅಭ್ಯರ್ಥಿಗಳು ಕೆಪಿಎಸ್‌ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಈಗಾಗಲೇ ಪರೀಕ್ಷಾ ಕೇಂದ್ರದಲ್ಲಿ ಕಟ್ಟುನಿಟ್ಟಿನ ಕ್ರಮ ಇದ್ರೂ, ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿರುವುದು ಕಂಡು ಬಂದಿದೆ.
ಇನ್ನು ಯಾದಗಿರಿ ಪರೀಕ್ಷೆ ಕೇಂದ್ರದಲ್ಲಿ ನಡೆದ ಅಕ್ರಮ ಪ್ರಕರಣ ಸಂಬಂಧ ಡಿಸಿ ಡಾ.ಸುಶೀಲಾ ಬಿ ಪ್ರತಿಕ್ರಿಯೆ ನೀಡಿದ್ದು ಇಂದು ಮತ್ತು ನಾಳೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ ಮಾಡುವ ಮಾಹಿತಿ ಎಸ್‌ಪಿಗೆ ಬಂದಿದೆ. ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದು ಬ್ಲೂಟೂತ್ ಡಿವೈಸ್, ಮೊಬೈಲ್ ಜಪ್ತಿ ಮಾಡಲಾಗಿದೆ. ಇಲ್ಲಿವರಗೇ ಮೂವರನ್ನು ವಿಚಾರಣೆ ಮಾಡಲಾಗುತ್ತಿದೆ. ವಿಚಾರಣೆ ನಡೆಸಿದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದರು. ಸದ್ಯ ಬ್ಲೂಟೂತ್ ಬಳಕೆ ಮಾಡಿದ ಆರು ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ೬ ಜನರನ್ನು ಠಾಣೆಗೆ ಕರೆ ತಂದ ಬಳಿಕ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ.