ಬಾಗಲಕೋಟ: ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಉರುಳಿದ್ದು, ಕಾರಿನಲ್ಲಿದ್ದ ಇಬ್ಬರಲ್ಲಿ ಓರ್ವ ಈಜಿ ದಡ ಸೇರಿದರೆ, ನೀರಿನಲ್ಲಿ ಮುಳುಗುತ್ತಿದ್ದ ಮತ್ತೋರ್ವ ವ್ಯಕ್ತಿಯನ್ನು ಯುವಕ ರಕ್ಷಿಸಿದ್ದಾನೆ.
ರಬಕವಿಬನಹಟ್ಟಿ ನಗರಕ್ಕೆ ಅರಿಸಿಣ ಕೊಳ್ಳಲು ಬಂದಿದ್ದ ಬನಹಟ್ಟಿಯ ವ್ಯಾಪಾರಿಗಳಾದ ಖಲೀಲ್ ರಾಜಣ್ಣವರ ಮತ್ತು ಮಲ್ಲಿಕ ಮುಲ್ಲಾ ಅವರು ತಮ್ಮ ಟಾಟಾ ಕಂಪೆನಿಯ ನೆಕ್ಸಾನ್ ಕಾರಿನಲ್ಲಿ ಘಟಪ್ರಭಾ ಹಾಗೂ ಮಲ್ಲಾಪೂರದ ವಾಹನ ದಟ್ಟಣೆ ತಪ್ಪಿಸಲು ಘಟಪ್ರಭಾ ಎಡದಂಡೆ ಕಾಲುವೆ ಮೇಲೆ ಹೊಸದಾಗಿ ನಿರ್ಮಿಸಿರುವ ಬೈಪಾಸ್ ರಸ್ತೆಯ ಮುಖಾಂತರ ಸಾಗುತ್ತಿರುವಾಗ ಮಲ್ಲಾಪೂರ ಪುಲ್ ಹತ್ತಿರ ದುರದುಂಡಿ-ಮಲ್ಲಾಪೂರದ ಹಾಗೂ ಬೈಪಾಸ್ ರಸ್ತೆ ಸಂದಿಸುವ (ಕ್ರಾಸ್ ಆಗುವ) ಸ್ಥಳದಲ್ಲಿ ರಸ್ತೆ ತಗ್ಗಾಗಿದ್ದು , ಬೈಪಾಸ್ ರಸ್ತೆಯ ಎರಡು ಬದಿಗಳು ದಿಬ್ಬಾಗಿದ್ದು ಆ ಸ್ಥಳದಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ದಿಬ್ಬದ ಕಾರಣದಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ಕಾಲುವೆಗೆ ಉರುಳಿದೆ.

ಆ ಸಮಯದಲ್ಲಿ ಧೈರ್ಯ ತೋರಿದ ವ್ಯಾಪಾರಿಗಳಿಬ್ಬರು ಕಾರಿನ ಬಾಗಿಲು ತೆರೆದು ಹೊರ ಬಂದಿದ್ದಾರೆ. ಅದರಲ್ಲಿ ಈಜು ಕಲಿತಿದ್ದ ಮಲ್ಲಿಕ ಮುಲ್ಲಾ ಈಜಿ ದಡ ಸೇರಿದ್ದಾರೆ.
ಇನ್ನು ಕಾರಿನಿಂದ ಹೊರ ಬಂದರೂ, ಈಜು ಬಾರದ ಖಲೀಲ್ ರಾಜಣ್ಣವರ ನೀರಿನಲ್ಲಿ ಮುಳುಗುತಿದ್ದಾಗ ಅದೇ ದಾರಿಯಲ್ಲಿ ಸಾಗುತ್ತಿದ್ದ ಪಾಮಲದಿನ್ನಿ ಗ್ರಾಮದ ಯುವಕ ಚೇತನ ವಿಠ್ಠಲ ಒಡೆಯರ ನೀರಿನಲ್ಲಿ ಮುಳುಗುತಿದ್ದ ಖಲೀಲ್ ರಾಜಣ್ಣವರ ಅವರನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ಕಾಪಾಡಿ ಸಾಹಸ ಮೆರೆದಿದ್ದಾನೆ.
