ಸೋಮವಾರಪೇಟೆ : ನಗರದ ವಿವೇಕಾನಂದ ವೃತ್ತದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಂದಕಕ್ಕೆ ಬಿದ್ದು, ಚಾಲಕ ಸೇರಿದಂತೆ ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ನಿನ್ನೆ ಸಂಜೆ ಸಂಭವಿಸಿದೆ.
ಆಲೇಕಟ್ಟೆ ಮಾರ್ಗದಿಂದ ಆಗಮಿಸಿದ ಕಾರು ಚಾಲಕನ ಅಜಾಗರೂಕತೆಯಿಂದಾಗಿ ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿ, ಅದರ ಪಕ್ಕದಲ್ಲೆ ನಡೆದುಕೊಂಡು ಬರುತ್ತಿದ್ದ ಪಾದಚಾರಿಗೂ ಗುದ್ದಿ ನಂತರ ಕಂದಕದೊಳಗೆ ಬಿದ್ದಿದೆ.ಪಟ್ಟಣದ ಮಾರ್ಕೆಟ್ ಏರಿಯಾ ನಿವಾಸಿ ಗಣೇಶ್ ಎಂಬವರಿಗೆ ಸೇರಿದ ಆಲ್ಟೋ ಕಾರನ್ನು ತೋಳೂರುಶೆಟ್ಟಳ್ಳಿಯ ಶಿವರಾಜ್ ಎಂಬಾತ ಚಾಲಿಸಿಕೊಂಡು ಬಂದಿದ್ದು, ವಿವೇಕಾನಂದ ವೃತ್ತದ ಬಳಿ ಅವಘಡ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಆಲೇಕಟ್ಟೆ ನಿವಾಸಿ ನಾರಾಯಣ ಎಂಬವರಿಗೆ ಕಾರು ಡಿಕ್ಕಿಯಾಗಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಾರಾಯಣ ಅವರಿಗೆ ಇಲ್ಲಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ಸಾಗಿಸಲಾಗಿದೆ.ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ನುಗ್ಗಿ ಪಲ್ಪಿಯಾದ ಕಾರನ್ನು ಸ್ಥಳೀಯರು ಮೇಲೆತ್ತಿ ಚಾಲಕ ಶಿವರಾಜ್ ಹಾಗೂ ಕಾರಿನಲ್ಲಿದ್ದ ಗಣೇಶ್ ಅವರುಗಳನ್ನು ಹೊರಗೆಳೆದು ಆಸ್ಪತ್ರೆಗೆ ಸಾಗಿಸಿದ್ದು, ಅದೃಷ್ಟವಶಾತ್ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.