Wednesday, July 8, 2026
Google search engine

Homeರಾಜಕೀಯನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರ ನಡೆಯಿತು: ವಿಜಯೇಂದ್ರ ಆರೋಪ

ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರ ನಡೆಯಿತು: ವಿಜಯೇಂದ್ರ ಆರೋಪ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನಡೆದ ಬಳಿಕ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಚರ್ಚೆಗಳ ಮೂಲಕ ತಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ತಿಗೆ ಯೋಗ್ಯ ವ್ಯಕ್ತಿಗಳು ಆಯ್ಕೆಯಾಗಬೇಕು. ಆದರೆ ಇತ್ತೀಚೆಗೆ ಹಣದ ಬಲ, ರಾಜಕೀಯ ಚಪಲ ಹಾಗೂ ಗೆಲುವಿನ ಭ್ರಮೆಯಿಂದ ಕೆಲವರು ಸ್ಪರ್ಧಿಸುತ್ತಿದ್ದಾರೆ. ವಿಧಾನಸೌಧವು ಪ್ರಜಾಪ್ರಭುತ್ವದ ದೇಗುಲವಾಗಿದ್ದು, ಅಲ್ಲಿಗೆ ಅರ್ಹರು ಮಾತ್ರ ಬರಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಕೇವಲ ಎರಡು ಸ್ಥಾನಗಳನ್ನು ಗೆದ್ದಿದ್ದು, ಅಡ್ಡ ಮತದಾನದ ಕುರಿತು ನಡೆದ ಚರ್ಚೆಗಳು ತಮಗೆ ಬೇಸರ ತಂದಿವೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ಆಂತರಿಕ ವಿಚಾರಗಳನ್ನು ಹೇಳಲು ಯಾವುದೇ ಸಂಕೋಚ ಇಲ್ಲ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಉತ್ತಮ ಆಡಳಿತ ನೀಡಿದ್ದರು. ಆದರೆ ಕಾಂಗ್ರೆಸ್‌ನ 40 ಪರ್ಸೆಂಟ್ ಭ್ರಷ್ಟಾಚಾರದ ಆರೋಪವನ್ನು ಸಮರ್ಪಕವಾಗಿ ಎದುರಿಸಲು ಸಾಧ್ಯವಾಗದೇ, ಪಕ್ಷದ ಆಂತರಿಕ ಸಮಸ್ಯೆಗಳ ಪರಿಣಾಮ ಇಂದು ವಿಪಕ್ಷದಲ್ಲಿ ಕುಳಿತುಕೊಳ್ಳುವಂತಾಗಿದೆ ಎಂದು ಹೇಳಿದರು.

ಯಡಿಯೂರಪ್ಪ–ಸಿದ್ದರಾಮಯ್ಯ ಹಾಗೂ ವಿಜಯೇಂದ್ರ–ಡಿ.ಕೆ. ಶಿವಕುಮಾರ್ ನಡುವೆ ಹೊಂದಾಣಿಕೆ ಇದೆ ಎಂಬ ಅಪಪ್ರಚಾರವನ್ನು ಬಿಜೆಪಿ ನಾಯಕರೇ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇದು ಯಡಿಯೂರಪ್ಪ ಅವರ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಎಂದರು. ಡಿ.ಕೆ. ಸುರೇಶ್ ವಿರುದ್ಧ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ. ಸಿ.ಎನ್. ಮಂಜುನಾಥ್ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ತಂತ್ರ ರೂಪಿಸಿದ್ದು ತಾವೇ ಎಂದು ಹೇಳಿದ ಅವರು, ಇಂತಹ ಸಂದರ್ಭದಲ್ಲಿ ಹೊಂದಾಣಿಕೆ ರಾಜಕಾರಣದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ತಾರಕಕ್ಕೇರಿದ್ದು, ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅವಧಿ ಪೂರ್ಣಗೊಳ್ಳುವ ಮುನ್ನವೇ ರಾಜ್ಯಕ್ಕೆ ಮೂರನೇ ಮುಖ್ಯಮಂತ್ರಿ ಬಂದರೂ ಅಚ್ಚರಿಯಿಲ್ಲ ಎಂದು ವಿಜಯೇಂದ್ರ ಟೀಕಿಸಿದರು.

RELATED ARTICLES
- Advertisment -
Google search engine

Most Popular