ವರದಿ : ವಿನಯ್ ದೊಡ್ಡಕೊಪ್ಪಲು ಕೆ.ಆರ್.ನಗರ : ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕಿನಲ್ಲಿ ಪಶುವೈದ್ಯ ಇಲಾಖೆ ವತಿಯಿಂದ ಏ.೧ರಿಂದ ೩೦ರವರೆಗೆ ಜಾನುವಾರುಗಳಿಗೆ ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಕಾರ್ಯಕ್ರಮ ನಡೆಯಲಿದೆ.
ಲಸಿಕೆಯು ಸಂಪೂರ್ಣವಾಗಿ ಉಚಿತ ವಾಗಿದ್ದು ಪಶುವೈದ್ಯ ಇಲಾಖೆಯಿಂದ ಲಸಿಕೆ ಹಾಕಲು ಮನೆಗಳ ಬಾಗಿಲಿಗೆ ಬಂದಾಗ ರೈತರು ಹಾಗೂ ಜಾನುವಾರುಗಳ ಮಾಲೀಕರು ಸಹಕಾರ ನೀಡಬೇಕು. ೩ ತಿಂಗಳು ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಂಜುನಾಥ್ ಮನವಿ ಮಾಡಿದ್ದಾರೆ. ಪತ್ರಿಕೆಯ ಸಂದರ್ಶನದಲ್ಲಿ ಕಾಲುಬಾಯಿ ರೋಗ ನಿಯಂತ್ರಣ ಸಂಬಂಧ ಅವರು ಸಮಗ್ರ ಮಾಹಿತಿ ನೀಡಿದ್ದಾರೆ.
ಕಾಲುಬಾಯಿ ಜ್ವರದ ಲಕ್ಷಣಗಳೇನು: ಎತ್ತು, ಹೋರಿ, ಹಸು ಮತ್ತು ಎಮ್ಮೆಗಳಲ್ಲಿ ಅತಿಯಾದ ಜ್ವರ ಕಂಡುಬಂದು ಬಾಯಿಯಲ್ಲಿ ಹುಣ್ಣು, ಜೊಲ್ಲು ಸುರಿಸುವುದು, ಕಾಲು ಕುಂಟುವುದು, ಕೆಚ್ಚಲಿನ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ರೋಗಗ್ರಸ್ತ ಪ್ರಾಣಿಗಳಿಂದ ನೇರ ಸಂಪರ್ಕ, ವೈರಾಣುಗಳಿಂದ ಕಲುಷಿತ ಗೊಂಡ ಮೇವು ಮತ್ತು ನೀರು, ಗಾಳಿ ಮುಖಾಂತರ ಹಾಗೂ ದನಗಳ ಸಂತೆ ಮತ್ತು ಜಾತ್ರೆಗಳಿಂದ ರೋಗ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
ಕಾಲುಬಾಯಿ ರೋಗದ ನಿಯಂತ್ರಣಕ್ಕಿರುವ ಚಿಕಿತ್ಸಾ ಕ್ರಮಗಳು: ಕಾಲುಬಾಯಿ ಜ್ವರವು ಒಂದು ವೈರಾಣುವಿನಿಂದ ಹರಡುತ್ತಿದ್ದು, ನಿರ್ದಿಷ್ಟ ಚಿಕಿತ್ಸೆ ಇಲ್ಲ. ಲಸಿಕೆ ಹಾಕಿಸುವುದೊಂದೇ ಕಾಲುಬಾಯಿ ರೋಗ ನಿಯಂತ್ರಿಸಲು ಇರುವ ಏಕೈಕ ಮಾರ್ಗವಾಗಿದೆ. ಈ ರೋಗದ ವಿರುದ್ದ ಪ್ರತಿ ೬ ತಿಂಗಳಿಗೊಮ್ಮೆ ಲಸಿಕೆ ಹಾಕಿಸಿ, ರೋಗ ಬರದಂತೆ ತಡೆಗಟ್ಟಬಹುದಾಗಿದೆ.
ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕಿನಲ್ಲಿ ಜಾನುವಾರು ಗಣತಿಯಂತೆ ದನ ಹಾಗೂ ಎಮ್ಮೆಗಳ ಸಂಖ್ಯೆ ೭೪೮೦೦ ಇದ್ದು, ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಆವಳಿ ತಾಲ್ಲೂಕಿನ ೩೪ ಗ್ರಾಮ ಪಂಚಾಯತಿಗಳ ೨೫ ಪಶುವೈದ್ಯ ಆಸ್ಪತ್ರೆ ಹಾಗೂ ಕೇಂದ್ರ, ಚಿಕಿತ್ಸಾಲಯಗಳಲ್ಲಿ ಕಾಲುಬಾಯಿ ಜ್ವರದ ಲಸಿಕೆ ಹಾಕಲು ಈಗಾಗಲೇ ಕಾರ್ಯಕ್ರಮಕ್ಕೆ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದ್ದರಿಂದ ರೈತರು ಹಾಗೂ ಜಾನುವಾರು ಮಾಲೀಕರು ಪಶುವೈದ್ಯ ಇಲಾಖೆಯಿಂದ ಲಸಿಕೆ ಹಾಕಲು ನಿಮ್ಮ ಮನೆ ಮನೆಗೆ ಬಾಗಿಲಿಗೆ ಬಂದಾಗ ತಪ್ಪದೇ ಕಡ್ಡಾಯವಾಗಿ ತಮ್ಮ ತಮ್ಮ ಲಸಿಕೆ ಹಾಕಿಸಿ ಎಂದು ಮನವಿ ಮಾಡಿದ್ದಾರೆ.
ಸೀಳುಗೊರಸುಗಳುಳ್ಳ ಪ್ರಾಣಿಗಳಿಗೆ ತಗುಲುವ ಕಾಲುಬಾಯಿ ಜ್ವರದ ಲಸಿಕೆಯನ್ನು ಅತ್ಯಗತ್ಯವಾಗಿ ಹಾಕಿಸಿಕೊಳ್ಳಬೇಕಾಗಿದೆ ರೈತರಿಗೆ ಆರ್ಥಿಕ ಸಂಕಷ್ಟವನ್ನುಂಟು ಮಾಡುವ ಈ ರೋಗವನ್ನು ತಡೆಗಟ್ಟಲು ನಾವೆಲ್ಲರೂ ಸನ್ನದ್ದರಾಗಬೇಕಾಗಿದೆ. ರಾಸುಗಳು ರೋಗದಿಂದ ಮುಕ್ತವಾದರೂ ಸಹ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಸಾಮರ್ಥ್ಯ ನಷ್ಟ ಮತ್ತು ಹಾಲಿನ ಇಳುವರಿ ಕಡಿಮೆಯಾಗುತ್ತದೆ ಆದ್ದರಿಂದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ ಎಲ್ಲಾ ರೈತ ಬಾಂಧವರು ಕಾಲುಬಾಯಿ ಜ್ವರ ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮೆಲ್ಲ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸ ಬೇಕು.
-ಡಾ.ಮಂಜುನಾಥ್, ಸಹಾಯಕ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು.