ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕ್ಷುಲ್ಲಕ ವಿಚಾರದ ಮನಸ್ತಾಪ ವಿಕೋಪಕ್ಕೆ ತಿರುಗಿದ ಪರಿಣಾಮ ಯುವಕನೋರ್ವ ತನ್ನ ಸ್ನೇಹಿತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ತಾಲೂಕಿನ ಚರ್‍ನನಹಳ್ಳಿ ಗ್ರಾಮದ ರೌಡಿ ಶೀಟರ್ ಮಹದೇವ(೨೪) ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಅದೇ ಗ್ರಾಮದ ಕೃಷ್ಣನಿಗೆ (೧೯) ಬೆಳಿಗ್ಗೆ ೯ ಗಂಟೆ ಸಮಯದಲ್ಲಿ ಚಾಕುವಿನಿಂದ ಮನಬಂದಂತೆ ಇರಿದಿದ್ದು ಇದರಿಂದ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ.
ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಇರಿತದಿಂದ ಗಾಯಗೊಂಡು ನಿತ್ರಾಣನಾಗಿದ್ದ ಕೃಷ್ಣನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ ನಂತರ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಾಕು ಇರಿತಕ್ಕೊಳಗಾಗಿರುವ ಕೃಷ್ಣನ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಕೆ.ಆರ್.ನಗರದ ಪೊಲೀಸರು ಆರೋಪಿ ಸಂದೀಪ ಬಂಧನಕ್ಕೆ ಬಲೆ ಬೀಸಿದ್ದು ಕೊಲೆಗೆ ಸಹಕಾರ ನೀಡಿದ ಆರೋಪದಡಿ ಚೀರ್‍ನನಹಳ್ಳಿ ಗ್ರಾಮದ ಮಂಜು ಮತ್ತು ಸಿದ್ದನಕೊಪ್ಪಲು ಚಂದು ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಮೈಸೂರು ದಕ್ಷಿಣ ವಲಯ ಡಿವೈಎಸ್‌ಪಿ ಕರೀಂರಾವತ್ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಕೃಷ್ಣರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭಯ ಭೀತರಾದ ಜನತೆ : ಪಟ್ಟಣದ ಬಸ್ ನಿಲ್ದಾಣದಲ್ಲಿ ಯುವಕನೋರ್ವನಿಗೆ ಚಾಕುವಿನಿಂದ ಇರಿದ ಘಟನೆ
ನಡೆದ ಕೂಡಲೇ ಸ್ಥಳದಲ್ಲಿದ್ದವರು ದಿಕ್ಕಾಪಾಲಾಗಿ ಓಡಿ ಹೋದರಲ್ಲದೆ ಈ ವಿಚಾರ ಪಟ್ಟಣದಾದ್ಯಂತಳ್ಗಿಚ್ಚಿನಂತೆ ಹರಡಿದ ಪರಿಣಾಮ ಜನರು ಭಯಬೀತರಾಗಿದ್ದರು.
” ಹೆಚ್ಚಿದ ಅಪರಾಧ ಚಟುವಟಿಕೆಗಳು”
ಕೆ.ಆರ್.ನಗರ ಪೋಲೀಸ್ ಠಾಣೆಯಲ್ಲಿ ಖಾಯಂ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಹೆಚ್ಚಿನ ಪೊಲೀಸ್ ಸಿಬ್ಬಂದಿಗಳ ಹುದ್ದೆ ಖಾಲಿ ಇದ್ದು ಇದರಿಂದ ಪಟ್ಟಣದಲ್ಲಿ ಕಳ್ಳತನ ಮತ್ತು ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದ್ದು ಈ ಬಗ್ಗೆ ದಕ್ಷಿಣ ವಲಯ ಐಜಿಪಿ ಅವರು ಗಮನ ಹರಿಸ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.