ಬೆಂಗಳೂರು : ಮದುವೆಗೆ ಬಟ್ಟೆ ಖರೀದಿ ಮಾಡುವ ನೆಪದಲ್ಲಿ ಹೋಗಿ ಲಕ್ಷಾಂತರ ರೂಪಾಯಿ ಮೌಲ್ಯದ ಸೀರೆಗಳನ್ನು ಕದ್ದು ಪರಾರಿಯಾಗುತ್ತಿದ್ದ ಖದೀಮರ ಗುಂಪನ್ನು ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಭರತ್, ಸುನೀತಾ, ಶಿವರಾಮ್ ಪ್ರಸಾದ್, ವೆಂಕಟೇಶ್, ರಾಣಿ, ಶಿವಕುಮಾರ್ ಬಂಧಿತರು.
ಗ್ರಾಹಕರ ಸೋಗಿನಲ್ಲಿ ಒಂದು ತಂಡವಾಗಿ ಬಟ್ಟೆ ಅಂಗಡಿಗಳಿಗೆ ಹೋಗುತ್ತಿದ್ದ ಆರೋಪಿಗಳು, ಮನೆಯಲ್ಲಿ ಮದುವೆ ಕಾರ್ಯಕ್ರಮ ಇದೆ ಎನ್ನುತ್ತಲೇ ದುಬಾರಿ ಬೆಲೆಯ ಸೀರೆಗಳನ್ನು ನೋಡುತ್ತಿದ್ದರು. ಐವತ್ತು ಅರವತ್ತು ಸೀರೆಗಳನ್ನು ನೋಡುತ್ತಾ ಅಂಗಡಿಯವರ ಗಮನ ಬೇರೆಡೆ ಸೆಳೆದು ಒಂದೆರಡು ಸೀರೆಗಳನ್ನು ಕಳ್ಳತನ ಮಾಡಿ ತಮ್ಮ ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದರು. ಕೆಲಸ ಆದ ಮೇಲೆ, ಸೀರೆಗಳು ಚೆನ್ನಾಗಿಲ್ಲ, ನಮ್ಮ ಬಜೆಟ್?ಗೆ ಹೊಂದುತ್ತಿಲ್ಲ ಎಂದು ಸ್ಥಳದಿಂದ ಕಾಲ್ಕೀಳುತ್ತಿದ್ದರು. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಈ ಖತರ್ನಾಕ್ ಕಳ್ಳರ ಕೈಚಳಕವನ್ನು ಗಮನಿಸಿದ ಅಂಗಡಿ ಮಾಲೀಕರೊಬ್ಬರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆರೋಪಿಗಳ ಪತ್ತೆಗಾಗಿ ಹೈಗ್ರೌಂಡ್ಸ್ ಹಾಗೂ ಅಶೋಕನಗರ ಠಾಣಾ ಪೊಲೀಸ್ ಸಿಬ್ಬಂದಿಗಳ ತಂಡವನ್ನು ರಚಿಸಲಾಗಿತ್ತು. ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಏಳು ಜನ ಆರೋಪಿಗಳನ್ನ ಬಂಧಿಸಲಾಗಿದ್ದು, ಸರಿಸುಮಾರು ಹತ್ತು ಲಕ್ಷ ರೂ ಮೌಲ್ಯದ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಸ್.ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.