ಶ್ರೀರಂಗಪಟ್ಟಣ: ಇತ್ತೀಚೆಗೆ ತನ್ನ ಸ್ವಂತ ತಂದೆಯಿಂದಲೇ ಹತ್ಯೆಯಾಗಿದ್ದ ಬಾಲಕಿ ಫಿರ್ದೋಶ್(೧೧) ಆತ್ಮಕ್ಕೆ ಶಾಂತಿ ಕೋರಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಕ್ಯಾಂಡಲ್ ಹಿಡಿದು ಮೌನ ಪ್ರತಿಭಟನೆ ನಡೆಸಿದರು.
ಪಟ್ಟಣದ ಕುವೆಂಪು ವೃತ್ತದ ಬಳಿ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಒಂದು ನಿಮಿಷ ಮೌನಾಚರಣೆ ನಡೆಸಿದ ಕಾರ್ಯಕರ್ತರು, ಇದೊಂದು ಹೇಯ ಕೃತ್ಯವಾಗಿದ್ದು ಇಡೀ ಸಮಾಜವೇ ತಲೆ ತಗ್ಗಿಸುವ ಕೆಲಸವಾಗಿದೆ ಎಂದರು.
ಶ್ರೀರಂಗಪಟ್ಟಣದ ಅಂಚೆಕಚೇರಿ ಬೀದಿಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ವಾಷಿಸುತ್ತಿದ್ದ ಶಿವಮೊಗ್ಗ ಮೂಲದ ಫಾರುಕ್ ಅಲಿಯಾಸ್ ಆಲಿ(೩೪) ತನ್ನ ಪ್ರೇಯಸಿ ಜಾಸ್ಮಿನ್(೪೦) ಸೇರಿ ಪುತ್ರಿ ಫಿರ್ದೋಶ್‌ಳನ್ನು ಹಲ್ಲೆ ಮಾಡಿ ಕೊಲೆಗೈದಿದ್ದರು.
ಬಳಿಕ ಬಾಲಕಿಯ ಶವವನ್ನು ಆಟೋ ಮೂಲಕ ಗಂಜಾಂಗೆ ಕೊಂಡೊಯ್ದು, ನಮ್ಮ ಮಗಳು ವಿದ್ಯುತ್ ಅವಘಢದಿಂದ ಸಾವನ್ನಪ್ಪಿದ್ದು ಅಂತ್ಯ ಸಂಸ್ಕಾರ ನಡೆಸಿಕೊಡುವಂತೆ ಮುಸ್ಲೀಂ ಮುಖಂಡರ ಬಳಿ ಕೇಳಿಕೊಂಡಿದ್ದರು.ಅನುಮಾನಗೊಂಡ ಮುಸ್ಲೀಂ ಮುಖಂಡರು ಪೋಲೀಸರಿಗೆ ಮಾಹಿತಿ ನೀಡಿದ ಮೇರೆಗೆ ತಂದೆಯೇ ಕೊಲೆ ಪಾತಕಿ ಎಂದು ತಿಳಿದು ಬಂದಿದೆ. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.