ಮೈಸೂರು: ಮೈಸೂರು ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ, ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಭವ್ಯ ಸ್ವಾಗತ ನೀಡುವ ಕಾರ್ಯಕ್ರಮ ರವಿವಾರ ಸಂಜೆ ಮಳೆಯ ನಡುವೆಯೂ ವೈಭವದಿಂದ ನೆರವೇರಿತು. ಅಶೋಕಪುರಂ ಅರಣ್ಯ ಭವನದಿಂದ ಅರಮನೆವರೆಗೆ ಮೆರವಣಿಗೆಯಾಗಿ ಸಾಗಿದ ಗಜಪಡೆಯನ್ನು ಮೈಸೂರು ಅರಮನೆ ಮಂಡಳಿ ವತಿಯಿಂದ ಜಯಮಾರ್ತಂಡ ದ್ವಾರದ ಬಳಿ ಪೂಜಾ ವಿಧಿಗಳೊಂದಿಗೆ ಬರಮಾಡಿಕೊಳ್ಳಲಾಯಿತು.
ಸಂಜೆ 6.40ಕ್ಕೆ ಪ್ರಾರಂಭವಾದ ಪೂಜಾ ಕಾರ್ಯಕ್ರಮ 6.45ಕ್ಕೆ ಮುಕ್ತಾಯಗೊಂಡಿದ್ದು, ಅಭಿಮನ್ಯು, ಭೀಮ, ಮಹೇಂದ್ರ, ವರಲಕ್ಷ್ಮಿ, ಧನಂಜಯ, ಪ್ರಶಾಂತ್, ಏಕಲವ್ಯ, ಕಂಜನ್ ಸೇರಿದಂತೆ ಎಲ್ಲಾ ಆನೆಗಳಿಗೆ ಕಬ್ಬು, ಬೆಲ್ಲ, ಹಣ್ಣು ಹಂಪಲು ನೀಡಿ ಸತ್ಕರಿಸಲಾಯಿತು. ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಪುಷ್ಪಾರ್ಚನೆ ಮಾಡಿದ್ದು, ಸ್ಥಳೀಯ ಕಲಾತಂಡಗಳು ಮಳೆ ನಡುವೆಯೂ ಸಾಂಸ್ಕೃತಿಕ ಪ್ರದರ್ಶನಗಳಿಂದ ಮನಮೆಳೆದವು.
ಅರಣ್ಯ ಭವನದಲ್ಲಿ ಮಧ್ಯಾಹ್ನ 3.30ರ ವೇಳೆಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಗಿದ್ದು, ಮಳೆಯ ನಡುವೆ ಅಧಿಕಾರಿಗಳು ಛತ್ರಿ ಹಿಡಿದು ಗಜಪಡೆಯನ್ನು ಮೆರವಣಿಗೆಗೆ ಸಜ್ಜುಗೊಳಿಸಿದರು. ಬಲ್ಲಾಳ್ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ ಮಾರ್ಗವಾಗಿ ಆನೆಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದವು. ಮಾರ್ಗದ ಪಕ್ಕದಲ್ಲಿ ನೂರಾರು ಜನರು ಆನೆಗಳನ್ನು ವೀಕ್ಷಿಸಿ ಅಭಿಮಾನ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಈ ಬಾರಿ ದಸರಾ ಗಾಂಧಿ ಜಯಂತಿ ದಿನ ಜಂಬೂಸವಾರಿ ಜರುಗಲಿದ್ದು, ಗಾಂಧೀಜಿಯ ಸಂದೇಶ ಸಾರುವ ದಸರಾ ಆಗಲಿದೆ ಎಂದು ಹೇಳಿದರು. ಈ ಬಾರಿಯೂ 21 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ ಇರುತ್ತದೆ. ಮುಂಚಿತವಾಗಿಯೇ ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲು ಸೂಚಿಸಿದ್ದೇವೆ. ದಸರಾ ಉದ್ಘಾಟಕರನ್ನು ಸಿಎಂ ಆಯ್ಕೆ ಮಾಡುತ್ತಾರೆ. ಡ್ರೋನ್ ಶೋ ಟಿಕೆಟ್ 3 ಸಾವಿರ ನಿಗದಿ ಮಾಡಲಾಗಿದೆ. ಈ ಬಾರಿಯೂ ಏರ್ ಶೋ ಇರುತ್ತದೆ ಎಂದರು.