ಊಟಕ್ಕೆ ಯಾವ ಸಾರು ಮಾಡಬೇಕು ಎನ್ನುವ ಯೋಚನೆ ಇದ್ದರೆ ಇಲ್ಲೊಂದು ಸಾರಿನ ರೆಸಿಪಿ ಇದೆ ಇದು ಎಲ್ಲರಿಗೂ ಇಷ್ಟವಾಗುತ್ತೆ. ಮಾತ್ರವಲ್ಲದೇ ಅನೇಕ ಕಾಯಿಲೆಗಳಿಗೆ ಮನೆ ಮದ್ದಾಗಿದೆ ಅದುವೇ “ಹುರುಳಿ ಕಾಳಿನ ಸಾರು“. ಹುರುಳಿ ರೈತಾಪಿ ಜನರ ಹಾಗೂ ಬಡವರ ಪ್ರಿಯವಾದ ಆಹಾರ. ಎಷ್ಟೋ ಜನರಿಗೆ ಹುರುಳಿ ಕಾಳಿನ ಪರಿಚಯವಿಲ್ಲ. ಈ ಹುರುಳಿ ಕಾಳು ರೋಗನಿರೋಧಕ ಶಕ್ತಿ ಹೆಚ್ಚಿಸಲು ಅತ್ಯಂತ ಸಹಕಾರಿಯಾಗಿದೆ. ಕಾಳುಗಳಲ್ಲಿ ಕಬ್ಬಿಣಾಂಶ, ಪ್ರೋಟೀನ್ ಹಾಗೂ ಅತ್ಯಧಿಕ ಕ್ಯಾಲ್ಸಿಯಂ ಹೊಂದಿರುವ ವಿಶೇಷ ಕಾಳುಗಳಲ್ಲಿ ಹುರುಳಿ ಸಹ ಒಂದು.ಹಾಗಾದರೆ ಹುರುಳಿ ಕಾಳಿನಿಂದ ಸಾರು ಮಾಡುವ ವಿಧಾನವನ್ನು ನಿಮಗಾಗಿ ಪ್ರಸ್ತುತಪಡಿಸುತ್ತಿದ್ದೇವೆ. ಈ ಸಾರನ್ನು ಮಾಡುವುದು ತುಂಬಾನೇ ಸುಲಭ. ಬಿಸಿ-ಬಿಸಿಯಾದ ಅನ್ನದ ಜೊತೆ ಬಡಿಸಿ ತಿನ್ನಲು ಈ ಸಾರು ತುಂಬಾ ರುಚಿ.ಒಮ್ಮೆ ಮಾಡಿ ನೋಡಿ ಸವಿಯಿರಿ….
ಬೇಕಾಗುವ ಸಾಮಗ್ರಿಗಳು
ಹುರುಳಿ ಕಾಳು-1ಕಪ್, ಹುಣಸೇ ಹುಳಿ-(1ನೆಲ್ಲಿ ಗಾತ್ರದಷ್ಟು), ಹಸಿಮೆಣಸು-3, ಒಣಮೆಣಸು-4, ಬೆಳ್ಳುಳ್ಳಿ-6 ರಿಂದ8 ಎಸಳು, ಎಣ್ಣೆ-4 ಚಮಚ, ಕರಿಬೇವು-ಸ್ವಲ್ಪ, ಸಾಸಿವೆ-ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೊದಲಿಗೆ ಹುರುಳಿ ಕಾಳನ್ನು ಚೆನ್ನಾಗಿ ತೊಳೆದು ಒಂದು ಕುಕ್ಕರ್ ನಲ್ಲಿ ಹಾಕಿ,ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರನ್ನು ಸೇರಿಸಿ ಬೇಯಿಸಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಅದಕ್ಕೆ ಸಾಸಿವೆ, ಬೆಳ್ಳುಳ್ಳಿ, ಹಸಿಮೆಣಸು, ಒಣಮೆಣಸು ಮತ್ತು ಕರಿಬೇವಿನ ಎಲೆಯನ್ನು ಹಾಕಿ. ತದನಂತರ ಅದಕ್ಕೆ ಬೆಂದ ಹುರುಳಿ ಕಾಳನ್ನು ಸೇರಿಸಿ ಸ್ವಲ್ಪ ಹುಣಸೇ ಹುಳಿಯ ರಸವನ್ನು ಹಾಕಿ ಸ್ವಲ್ಪ ಹೊತ್ತು ಕುದಿಸಿದರೆ ಆರೋಗ್ಯಕರವಾದ ಹುರುಳಿ ಕಾಳಿನ ಸಾರು ಸವಿಯಲು ರೆಡಿ………………