ಉತ್ತರ ಪ್ರದೇಶ: ಬದೌನ್‌ನಲ್ಲಿ ಭ್ರೂಣದ ಲಿಂಗವನ್ನು ಪರೀಕ್ಷಿಸಲು ತನ್ನ ಎಂಟು ತಿಂಗಳ ಗರ್ಭಿಣಿ ಪತ್ನಿಯ ಹೊಟ್ಟೆಯನ್ನು ಸೀಳಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಬದೌನ್‌ನ ಸಿವಿಲ್ ಲೈನ್ಸ್‌ನ ನಿವಾಸಿಯಾಗಿರುವ ಆರೋಪಿ ಪನ್ನಾ ಲಾಲ್ ಸೆಪ್ಟೆಂಬರ್ ೨೦೨೦ರಲ್ಲಿ ತನ್ನ ಪತ್ನಿ ಅನಿತಾ ಮೇಲೆ ಹಲ್ಲೆ ನಡೆಸಿದ್ದ. ದಂಪತಿಗೆ ಐದು ಹೆಣ್ಣು ಮಕ್ಕಳಿದ್ದು ಗಂಡು ಮಗು ಬೇಕು ಎಂಬ ಕಾರಣಕ್ಕೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ.
ಪನ್ನಾ ಲಾಲ್ ತಮ್ಮ ಹೆಣ್ಣು ಮಕ್ಕಳಿಗೆ ನಿತ್ಯ ಕಿರುಕುಳ ನೀಡುತ್ತಿದ್ದು, ಹೆಣ್ಣು ಮಕ್ಕಳಿಗೆ ಮಾತ್ರ ಜನ್ಮ ನೀಡುತ್ತಿರುವುದೇಕೆ, ಗಂಡು ಮಗುವನ್ನು ಕೂಡಾ ಹೆರು ಎಂದು ಪತ್ನಿಗೆ ಹಿಂಸೆ ನೀಡುತ್ತಿದ್ದ ಎಂದು ಅನಿತಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಹಲವಾರು ಬಾರಿ ಅನಿತಾ ಕುಟುಂಬವು ಪನ್ನಾ ಲಾಲ್ ಜೊತೆ ಜಗಳವಾಡದಂತೆ ಮನವಿ ಮಾಡಿದ್ದಾರೆ. ಆದರೆ ಪನ್ನಾ ಲಾಲ್ ವಿಚ್ಛೇದನ ನೀಡುವುದಾಗಿ ಮತ್ತು ಗಂಡು ಮಗುವಿಗಾಗಿ ಬೇರೆ ಮಹಿಳೆಯನ್ನು ಮದುವೆಯಾಗುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಮಗುವಿನ ಲಿಂಗದ ಬಗ್ಗೆ ದಂಪತಿಗಳ ನಡುವೆ ವಾಗ್ವಾದ ನಡೆದಿದ್ದು ಈ ಸಂದರ್ಭದಲ್ಲಿ ಪನ್ನಾ ಲಾಲ್ ಮಗು ಗಂಡೋ ಹೆಣ್ಣೋ ಎಂದು ತಾನೇ ನೋಡುವುದಾಗಿ ಹೇಳಿ ಪತ್ನಿಯ ಹೊಟ್ಟೆಯನ್ನು ಸೀಳಿದ್ದಾನೆ. ದಾಳಿಯಿಂದ ಅನಿತಾ ಕರುಳಿಗೆ ಗಾಯವಾಗಿದ್ದು, ಗರ್ಭಪಾತವಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸೌರಭ್ ಸಕ್ಸೇನಾ ಅವರು ಪನ್ನಾ ಲಾಲ್‌ಗೆ ಜೀವಾವಧಿ ಶಿಕ್ಷೆ ಮತ್ತು ೫೦,೦೦೦ ರೂಪಾಯಿ ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.