ಚಾಮರಾಜನಗರ: ನಾಡಿನ ಪ್ರಸಿದ್ಧ ಕವಿಗಳಾದ ನಿಸಾರ್ ಅಹಮದ್ ಹಾಗು ಸಿದ್ಧಲಿಂಗಯ್ಯ ನವರ ಕೊಡುಗೆಗಳು ಕುರಿತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಕವಿಗಳಾದ ನಿಸಾರ್ ಅಹಮದ್ ಹಾಗೂ ಸಿದ್ದಲಿಂಗಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರು ಹಾಗೂ ತಾಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಬಿಕೆ ರವಿಕುಮಾರ್ ಉದ್ಘಾಟಿಸಿ ಮಾತನಾಡುತ್ತಾ ,ಬಂಡಾಯ ಸಾಹಿತಿಯಾಗಿ ,ನಾಡಿನ ಅಸಮಾನತೆಯ ವಿರುದ್ಧ ತೀವ್ರ ಸಾಹಿತ್ಯ ರಚನೆ ಮಾಡಿ ಸಮಾಜದ ಶುದ್ದಿಗಾಗಿ ಹೋರಾಟ ನಡೆಸಿದ ಕವಿ, ಸಾಹಿತಿ. ಸಿದ್ದಲಿಂಗಯ್ಯನವರ ಕವನ ಸಂಕಲನಗಳು, ವಿಮರ್ಶಾ ಲೇಖನಗಳು ,ಚಿಂತನೆಗಳು, ಬರವಣಿಗೆಗಳು ನಾಡಿನಲ್ಲಿ ಇಂದಿಗೂ ತುಂಬಾ ಪ್ರಭಾವವಾಗಿದೆ. ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸಿದ್ದಲಿಂಗಯ್ಯನವರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ನಿತ್ಯೋತ್ಸವದ ಕವಿ ಯಾಗಿ ಪ್ರಸಿದ್ಧರಾದ ನಾಡಿನ ಹೆಮ್ಮೆಯ ನಿಸಾರ್ ಅಹಮದ್ ರವರ ಸಾಹಿತ್ಯ ರಚನೆ ಅವರ ಕವನ ಸಂಕಲನಗಳು, ನಾಡಿನ ನೂರಾರು ಕವಿಗಳಿಗೆ ಸ್ಪೂರ್ತಿಯನ್ನು ತುಂಬಿದೆ . ಶಿಕ್ಷಣ ಪ್ರೇಮಿಯಾಗಿ ಸಾಹಿತ್ಯದ ಆರಾಧಕರಾಗಿದ್ದರು. ಕವಿ ಸಿದ್ದಲಿಂಗಯ್ಯನವರು ವಿಧಾನ ಪರಿಷತ್ತಿನ ಸದಸ್ಯರಾಗಿ ,ಚಿಂತಕರಾಗಿ ಕಾರ್ಯಶೀಲತೆಯ ಮೂಲಕ ಸದೃಢ ಸಾಹಿತ್ಯ ,ಪ್ರಸ್ತುತ ಚಿಂತನೆಗಳು ಮತ್ತು ಸಮಾಜದ ನೋವಿನ ಸಾಹಿತ್ಯಗಳನ್ನು ರಚನೆ ಮಾಡಿ ಪ್ರಭಾವ ಬೀರಿದ್ದಾರೆ . ಕನ್ನಡ ಸಾಹಿತ್ಯ ಪರಿಷತ್ತಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಡಿಗೆ ಸೇವೆ ಸಲ್ಲಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಗದೀಶ್, ಲಕ್ಷ್ಮಿ ನರಸಿಂಹ, ರವಿಚಂದ್ರ ಪ್ರಸಾದ್, ಸರಸ್ವತಿ, ಪದ್ಮ ಪುರುಷೋತ್ತಮ್ ಬಿಕೆ ಆರಾಧ್ಯ, ಶಿವಲಿಂಗ ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.