ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕಳೆದ ಒಂದು ವಾರಗಳಿಂದ ಆಗಾಗ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶುಕ್ರವಾರ ರಾತ್ರಿ ಸೆರೆಯಾಗಿದೆ.
ಚುಂಚನಕಟ್ಟೆ ಸಮೀಪದ ಮಾಳನಾಯಕನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಗಾಗ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದ್ದ ಚಿರತೆಯಿಂದ ಜನತೆ ಹೊಲ ಗದ್ದೆಗಳಿಗೂ ಹೋಗದೆ, ಜಾನುವಾರುಗಳಿಗೆ ಮೇವು ತರಲು ಭಯ ಭೀತಿಗೊಂಡು, ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಮನವಿ ಮೂಲಕ ಒತ್ತಾಯಿಸಿದ್ದರು.
ಈ ಹಿನ್ನಲೆಯಲ್ಲಿ ವಲಯ ಅರಣ್ಯಾಧಿಕಾರಿ ಹರಿಪ್ರಸಾದ್ ನೇತೃತ್ವದ ತಂಡ ಚಿರತೆ ಕಾಣಿಸಿ ಕೊಂಡಿದ್ದ ಸ್ಥಳ ಪರಿಶೀಲನೆ ನಡೆಸಿ ಬೋನ್ ಇರಿಸಿದ್ದರು.
ಇದೀಗ ಬೋನಿಗೆ ಸುಮಾರು 2 ವರ್ಷದ ಗಂಡು ಚಿರತೆ ಸೆರೆಯಾಗಿದೆ. ಚಿರತೆ ಬೋನಿಗೆ ಬಿದ್ದ ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಹರಿಪ್ರಸಾದ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಈ ಚಿರತೆಯನ್ನು ನಾಗರಹೊಳೆ ಅಥವಾ ಬಂಡೀಪುರ ಅರಣ್ಯಕ್ಕೆ ಬಿಡಲಾಗುವುದು ಎಂದು ತಿಳಿಸಿದರು.
ಇದರಿಂದ ರೈತರು ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದವರು. ಇದೀಗ ಚಿರತೆ ಸೆರೆಯಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಾದ ಮಠದಕೊಪ್ಪಲು ಎಂ.ಎಸ್ ಮಹದೇವ್, ಪ್ರಸನ್ನ, ಸುನಿಲ್, ಗಿಡ್ಡಿರೇಗೌಡ, ಕುಮಾರ್ ನಾಯಕ, ಸಿಬ್ಬಂದಿ ರಾಕೇಶ್, ರಾಘು, ದೇವರಾಜು ಸೇರಿದಂತೆ ಮತ್ತಿತರರು ಇದ್ದರು.