ದೆಹಲಿ-ಮೀರತ್ ಎಕ್ಸ್ ಪ್ರೆಸ್ ವೇನ ಪರಾತ್ ಪುರ್ ಪ್ರದೇಶದ ಕಾಶಿ ಟೋಲ್ ಪ್ಲಾಜಾದಲ್ಲಿ ಮಹಿಳಾ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬ ಕಾರು ಚಲಾಯಿಸಿದ ಘಟನೆ ನಡೆದಿದೆ.
ಇದ್ದಕ್ಕಿದ್ದಂತೆ ಕಾರಿನ ವೇಗ ಹೆಚ್ಚಿಸಿದ ಚಾಲಕ ಪ್ಲಾಜಾದ ಮಹಿಳಾ ಸಿಬ್ಬಂದಿಗೆ ಡಿಕ್ಕಿ ಹೊಡೆದು ಮುಂದೆ ಹೋಗಿದ್ದಾನೆ. ಆಕೆ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ. ಬಳಿಕ ಕಾರು ಮತ್ತಷ್ಟು ವೇಗವಾಗಿ ಮುಂದೆ ಹೋದಾಗ ಅವರು ಕೆಳಗೆ ಬಿದ್ದಿದ್ದಾರೆ.
ಗಂಭೀರವಾಗಿ ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿಯಿಂದ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿ ನಮ್ಮ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಟೋಲ್ ಕೇಳಿದಾಗ ಸಿಬ್ಬಂದಿ ಮೇಲೆ ಕಾರು ಚಲಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೊಂದು ಗಂಭೀರ ಘಟನೆಯಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಆಡಳಿತವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಶಿ ಟೋಲ್ ಪ್ಲಾಜಾದ ವ್ಯವಸ್ಥಾಪಕ ಅನಿಲ್ ಶರ್ಮಾ ಎಎನ್‌ಐಗೆ ತಿಳಿಸಿದ್ದಾರೆ.
ದೂರು ದಾಖಲಾಗಿದ್ದು, ಟೋಲ್ ಬೂತ್ ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಗುರುತಿಸುವುದು ಸೇರಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.