Friday, April 18, 2025
Google search engine

Homeರಾಜ್ಯಸುದ್ದಿಜಾಲಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅರ್ಥಪೂರ್ಣ ಆಚರಣೆ : ಗಮನ ಸೆಳೆದ ಮಾನವ ಸರಪಳಿ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅರ್ಥಪೂರ್ಣ ಆಚರಣೆ : ಗಮನ ಸೆಳೆದ ಮಾನವ ಸರಪಳಿ

ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರದಲ್ಲಿಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ವಿಶಿಷ್ಟ, ವಿನೂತನವಾಗಿ ಆಚರಿಸಲಾಯಿತು. ಬೀದರ್‍ನಿಂದ ಚಾಮರಾಜನಗರದವರೆಗೆ ರಾಜ್ಯದ 31 ಜಿಲ್ಲೆಗಳನ್ನೊಳಗೊಂಡ ಅತಿ ಉದ್ದದ ಮಾನವ ಸರಪಳಿಯನ್ನು ರಾಜ್ಯಾದ್ಯಂತ ಏಕಕಾಲದಲ್ಲಿ ಆಯೋಜಿಸಲಾಗಿತ್ತು. ಚಾಮರಾಜನಗರ ಜಿಲ್ಲೆಯ ಸರಹದ್ದು ಆರಂಭವಾಗುವ ಮೂಗೂರು ಕ್ರಾಸ್‍ನಿಂದ ಪಟ್ಟಣದ ರಾಮಸಮುದ್ರದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆವರೆಗೆ ಏರ್ಪಡಿಸಲಾಗಿದ್ದ 25 ಕಿ.ಮೀ. ಉದ್ದದ ಮಾನವ ಸರಪಳಿ ಕಾರ್ಯಕ್ರಮ ಗಮನ ಸೆಳೆಯಿತು.

ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್, ಎಂ.ಎಸ್.ಐ.ಎಲ್. ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಉಗ್ರಾಣ ನಿಗಮದ ಅಧ್ಯಕ್ಷರಾದ ಎಸ್. ಜಯಣ್ಣ ಸೇರಿದಂತೆ ಇನ್ನಿತರೆ ಗಣ್ಯರು ಮೂಗೂರು ಕ್ರಾಸ್ ಬಳಿ ಆರಂಭವಾದ ಮಾನವ ಸರಪಳಿಗೆ ಶುಭ ಕೋರಿ ಹಾರೈಸಿದರು.

ದಾರಿಯುದ್ದಕ್ಕೂ ಮಾನವ ಸರಪಳಿಯಲ್ಲಿ ಸಮವಸ್ತ್ರ ಧರಿಸಿದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸಮುದಾಯಗಳ ಮುಖಂಡರು, ಜನಪ್ರತಿನಿಧಿಗಳು, ಸರ್ಕಾರಿ ನೌಕರರು, ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಸೇರಿದಂತೆ ಸರ್ವರೂ ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಬಿಂಬಿಸುವ ಮಹತ್ತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾನವ ಸರಪಳಿಯ ಮೆರಗನ್ನು ಹೆಚ್ಚಿಸಿದರು.

ಮಾನವ ಸರಪಳಿ ರಚನೆಯಾಗಿದ್ದ ಪ್ರತಿ ಕಿ.ಮೀ. ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವೇಷಭೂಷಣ ಹಾಗೂ ಇನ್ನಿತರೆ ಸಾಂಪ್ರದಾಯಿಕ ದಿರಿಸು ಧರಿಸಿದ್ದ ಮಕ್ಕಳು ನಿಂತು ವಿಶೇಷ ಗಮನ ಸೆಳೆದರು. ಮಾರ್ಗಮಧ್ಯೆ ಶಾಲಾ ಮಕ್ಕಳು ಜಿಲ್ಲೆಯ ಬಿಳಿಗಿರಿರಂಗನ ಅರಣ್ಯವಾಸಿಗಳ ನೃತ್ಯ ಪ್ರದರ್ಶಿಸಿದರು. ಗಾರುಡಿ ಗೊಂಬೆ, ಡೊಳ್ಳು, ಇನ್ನಿತರೆ ಕಲಾ ತಂಡಗಳು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದವು.

ಮಾನವ ಸರಪಳಿ ಮಾರ್ಗದಲ್ಲಿ ಬರುವ ಗ್ರಾಮಗಳಲ್ಲಿ ಜನರ ಉತ್ಸಾಹ ಮೇರೆ ಮೀರಿತ್ತು. ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟು ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದರು. ಸಂವಿಧಾನ ಪೀಠಿಕೆ ವಾಚನ ಮಾಡಿದರು. ಮಾನವ ಸರಪಳಿಗೆ ಕೈ ಜೋಡಿಸಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಸಾರ್ಥಕಗೊಳಿಸಿದರು.

ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರು ಮೂಗೂರು ಕ್ರಾಸಿನ ಸ್ವಾಗತ ಕಮಾನಿನ ಬಳಿ ನೃತ್ಯ ಪ್ರದರ್ಶನ ನೀಡಿದರು. ನಗರದ ಪಚ್ಚಪ್ಪ ವೃತ್ತದಲ್ಲಿ ಸೋಲಿಗರ ಗೊರುಕನ ನೃತ್ಯ, ಶಾಲಾ ಮಕ್ಕಳ ಬ್ಯಾಂಡ್ ವಾದನ, ವೇಷಭೂಷಣ ಧರಿಸಿದ ಶಾಲಾ ಮಕ್ಕಳು, ಪ್ರಜಾಪ್ರಭುತ್ವ ಆಚರಣೆಯ ಸಂತಸ ಇಮ್ಮಡಿಗೊಳಿಸಿದರು. ಸಾಕಷ್ಟು ಸಂಖ್ಯೆಯ ಸಾರ್ವಜನಿಕರು ವೃತ್ತದಲ್ಲಿ ಸಮಾವೇಶಗೊಂಡು ಆಚರಣೆಯ ವೈಶಿಷ್ಟ್ಯವನ್ನು ಕಣ್ತುಂಬಿಕೊಂಡರು.

ಬಿ. ರಾಚಯ್ಯ ಜೋಡಿರಸ್ತೆಯ ಮಧ್ಯಭಾಗದಿಂದ ರಾಮಸಮುದ್ರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ವರೆಗೆ ಒಂದು ಕಿ.ಮೀ. ವರೆಗೆ ಉದ್ದನೆಯ ರಾಷ್ಟ್ರದ ತ್ರಿವರ್ಣ ಧ್ವಜ ಪ್ರದರ್ಶನವು ಕಾರ್ಯಕ್ರಮದ ಅತ್ಯಂತ ವಿಶೇಷ ಎನಿಸಿತು.

ಮಾನವ ಸರಪಳಿಯಲ್ಲಿ ಭಾಗವಹಿಸಿದವರಿಗೆ ಉಪಹಾರ, ಕುಡಿಯುವ ನೀರು, ಮೊಬೈಲ್ ಶೌಚಾಲಯ, ಅಂಬುಲೆನ್ಸ್ ಬೈಕ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಗಡಿಜಿಲ್ಲೆ ಚಾಮರಾಜನಗರದಲ್ಲಿ ಆಯೋಜಿತವಾಗಿದ್ದ ಮಾನವ ಸರಪಳಿ ಅರ್ಥಪೂರ್ಣ ಹಾಗೂ ಯಶಸ್ವಿಯಾಗಿ ನಡೆಯಿತು.

RELATED ARTICLES
- Advertisment -
Google search engine

Most Popular