ಚೆನ್ನೈ: ಸತ್ತರೆ ಮಗನ ಕಾಲೇಜು ಶುಲ್ಕ ಕಟ್ಟಲು ಪರಿಹಾರ ಹಣ ಸಿಗುತ್ತದೆಂದು ಮಹಿಳೆಯೊಬ್ಬರು ಚಲಿಸುತ್ತಿದ್ದ ಬಸ್ಸಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಾಪತಿ (45) ಎಂದು ಗುರುತಿಸಲಾಗಿರುವ ಮಹಿಳೆ ಸೇಲಂ ಜಿಲ್ಲೆಯ ಕಲೆಕ್ಟರ್ ಕಚೇರಿಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
45 ವರ್ಷದ ಪಾಪತಿ ಅವರು ಜೂನ್ 28 ರಂದು ವೇಗವಾಗಿ ಬಂದ ಬಸ್ ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದರು. ಅಪಘಾತ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ನೀಡುತ್ತಾರೆ ಎಂದು ಯಾರೋ ತಪ್ಪು ಮಾಹಿತಿ ನೀಡಿದ ಕಾರಣ, ತನ್ನ ಮಗನ ಕಾಲೇಜು ಶುಲ್ಕ ಕಟ್ಟಲು ಹಣ ಮತ್ತು ಮಗನ ಭವಿಷ್ಯಕ್ಕೆ ಹಣ ಸಹಾಯವಾಗುತ್ತದೆ ಎಂದು ಇಂತಹ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯಿದೆ.
ಪೊಲೀಸ್ ಮೂಲಗಳ ಪ್ರಕಾರ, ಜೂನ್ 28 ರಂದು ಪಾಪತಿ ಬಸ್ಸಿಗೆ ಅಡ್ಡ ಬರಲು ಯತ್ನಿಸಿದ್ದರು, ಆದರೆ, ಆಕೆಗೆ ಬೈಕ್ ಡಿಕ್ಕಿ ಹೊಡೆದಿದೆ. ಇದಾಗಿ ಸ್ವಲ್ಪ ಸಮಯದ ನಂತರ, ಆಕೆ ರಸ್ತೆ ದಾಟಲು ಪ್ರಯತ್ನಿಸುವಂತೆ ಇನ್ನೊಂದು ಬಸ್ಸಿನ ಮುಂದೆ ಹೋಗಿ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ.
ಮಗನ ಕಾಲೇಜು ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಕಾರಣ ಪಾಪತಿ ಖಿನ್ನತೆಗೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ.