ವರದಿ , ಎಡತೊರೆ ಮಹೇಶ್
ಹೆಚ್.ಡಿ.ಕೋಟೆ : ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ವೃಕ್ಷ ಮಾತೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ದಿವಂಗತ ಸಾಲುಮರದ ತಿಮ್ಮಕ್ಕ ಮತ್ತು ಜಾನಪದ ದಾಸರಾದ ಗಿರಿಯಪ್ಪ ಅವರಿಗೆ ಸಂಗೀತ ಗಾನ ನಮನ ಕಾರ್ಯಕ್ರಮ ನಡೆಯಿತು.
ಗಾನ ವಸುಧೆ ಟ್ರಸ್ಟ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಕೆಂಚನಹಳ್ಳಿ ಗ್ರಾಮಸ್ಥರ ಸಹಕಾರದೊಂದಿಗೆ ಆಯೋಜನಗೊಂಡಿದ್ದ ಸಂಗೀತ ಗಾನ ನಮನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಮಾತನಾಡಿದ ದೊಡ್ಡಯ್ಯ ಪ್ರತಿಯೊಂದು ಜೀವಿಯ ಅವಾಸ ಸ್ಥಾನ ಪ್ರಕೃತಿ, ಪರಿಸರ ಉಳಿದರೆ ಮಾತ್ರ ಎಲ್ಲರ ಬದುಕು ಸುಂದರ ಈ ನಿಟ್ಟಿನಲ್ಲಿ ದಿವಂಗತ ಸಾಲುಮರದ ತಿಮ್ಮಕ್ಕ ಮಕ್ಕಳಿಲ್ಲದ ಕೊರಗನ್ನು ನೀಗಿಸಲು ಗಿಡ ಮರಗಳನ್ನು ನೆಟ್ಟು ಅವಕ್ಕೆ ನೀರೆರೆದು ಮಕ್ಕಳಂತೆ ಸಾಕಿದಂತ ಕೀರ್ತಿ ಅವರಿಗೆ ಸಲ್ಲುತ್ತದೆ, ಈ ದಂಪತಿಗಳು ಮಾಡಿದ ಸಾಮಾಜಿಕ ಕಾರ್ಯಕ್ಕೆ ರಾಜ್ಯ ಸರ್ಕಾರವು ಪದ್ಮ ಶ್ರೀ ಪ್ರಶಸ್ತಿಯನ್ನ ನೀಡುವುದರ ಮೂಲಕ ಗೌರವಿಸಿತು ಇಂತಹ ಮಹಾನ್ ವ್ಯಕ್ತಿಗಳ ಸಾಮಾಜಿಕ ಕಾರ್ಯ ಇಂದಿಗೂ ನಮಗೆ ಪ್ರೇರಣೆಯಾಗಿದೆ.
ಈ ಮಣ್ಣಿನ ಸೊಗಡಿನ ಮಹಿಮೆಯ ಪ್ರಕೃತಿಯ ವರವಾಗಿ ಜಾನಪದ ಬಾಯಿಂದ ಬಾಯಿಗೆ ಗುನುಗುವುದರ ಮೂಲಕ ಜಾನಪದ ಸಂಸ್ಕೃತಿ ಬೆಳೆಯುವುದಕ್ಕೆ ದಾಸ ಸಂಸ್ಕೃತಿ ಉಳಿವಿಗೆ ಹಲವಾರು ವರ್ಷಗಳಿಂದ ಜೀವಂತವಾಗಿರುವುದಕ್ಕೆ ನಮ್ಮ ಪೂರ್ವಿಕರೇ ಪ್ರೇರಣೆ ಇಂತಹ ಜಾನಪದ ಕಾರ್ಯಕ್ರಮಗಳು ಪ್ರತಿಯೊಬ್ಬರಲ್ಲೂ ಪ್ರತಿ ಹಳ್ಳಿಗಳಲ್ಲೂ ಪ್ರಸರವಾದಾಗ ಮಾತ್ರ ಮುಂದಿನ ಪೀಳಿಗೆಗೂ ಜಾನಪದವನ್ನು ವರ್ಗಾಯಿಸಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದೇವಮ್ಮ, ನಂಜಮ್ಮ, ರಾಜು, ಜ್ಞಾನವೀಣೆ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ದೇವರಾಜು, ಹಾಗೂ ಗಾನ ವಸುಧೆ ಟ್ರಸ್ಟ್ ಅಧ್ಯಕ್ಷೆ ಚಿಕ್ಕಮ್ಮ ಇದ್ದರು, ಜಾನಪದ ಕಲಾವಿದರಾದ ಮನು ಸಿಂಚನ, ಪ್ರಕಾಶ್ ನಂಜನಗೂಡು, ವೀರಭದ್ರ ಸ್ವಾಮಿ, ಚಂದು, ದೊಡ್ಡಯ್ಯ ತಂಡದವರಿಂದ ಜಾನಪದ ಕತೆ, ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು ಗಾನ ವಸುಧೆ ಟ್ರಸ್ಟ್ ಕಾರ್ಯದರ್ಶಿ ಮರಿಸ್ವಾಮಿ ಹಂಸ, ಗ್ರಾಮದ ಮುಖಂಡರು ಹಾಜರಿದ್ದರು.



