ಬಾಗಲಕೋಟೆ: ಸಿದ್ದಾಂತ ವಿರೋಧಿಸುವವರನ್ನು ಹತ್ಯೆ ಮಾಡುವಂತಹ ಹೊಸ ಸಂಚು ಇತ್ತೀಚಿಗೆ ಶುರುವಾಗಿದೆ. ಈಗಾಗಲೇ ಸಾಹಿತಿಗಳಿಗೆ ಭದ್ರತೆಯನ್ನು ಒದಗಿಸಲಾಗಿದೆ ಎಂದು ರಾಜ್ಯದಲ್ಲಿ ಸಾಹಿತಿಗಳಿಗೆ ಕೊಲೆ ಬೆದರಿಕೆ ವಿಚಾರ ಕುರಿತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯಿಸಿದರು.
ಬಾಗಲಕೋಟೆಯಲ್ಲಿಂದು ಮಾತನಾಡಿದ ಅವರು, ಕಲಬುರ್ಗಿಯವರ ಕೊಲೆಯಿಂದ ಹಿಡಿದು ಬಹಳಷ್ಟು ಸಾಹಿತಿಗಳ ಕೊಲೆಯಾಗಿರುವಂತಹದ್ದು. ಈಗಲೂ ಸಹ ಸಾಹಿತಿಗಳಿಗೆ ಕೊಲೆ ಬೆದರಿಕೆ ಇದ್ದಾವೆ, ಇಲ್ಲ ಅಂತಲ್ಲ. ಇದು ಸ್ಥಳೀಯವಾಗಿ ಬೆದರಿಕೆ ಅಲ್ಲ. ಸಾಹಿತಿಗಳ ಬೆದರಿಕೆ ಇದೊಂದು ದೊಡ್ಡ ಸಂಚು ಎಂದರು.
ಆಪರೇಶನ್ ಹಸ್ತದ ವಿಚಾರವಾಗಿ ಪ್ರತಿಕ್ರಿಯಿಸಿ, ಪಕ್ಷಕ್ಕೆ ಬಂದವರಿಗೆ ಸ್ವಾಗತ ಕೋರುತ್ತೇನೆ. ಸೇರ್ಪಡೆಯನ್ನ ನಮ್ಮ ಪಕ್ಷ ತೀರ್ಮಾನಿಸುತ್ತೆ. ರಾಜಕಾರಣ ನಿಂತ ನೀರಲ್ಲ. ಅದು ಚಲನೆಯಲ್ಲಿ ಇರತಕ್ಕಂತಹದ್ದು. ಬಹಳ ಫಾಸ್ಟ್ ಚೇಂಜಿಂಗ್ ಇರೋದೆ ರಾಜಕಾರಣದಲ್ಲಿ. ಬರುವವರಿಗೆ ಯಾರೂ ಬೇಡ ಅಂತ ಹೇಳೋದಿಲ್ಲ, ಹೋಗುವವರಿಗೆ ಯಾರೂ ಇರು ಅಂತಾನೂ ಹೇಳೋದಿಲ್ಲ. ಎಲ್ಲಾ ರಾಜಕೀಯ ಪಕ್ಷದಲ್ಲಿ ಈ ತಂತ್ರಗಾರಿಕೆ ಇದ್ದೇ ಇರುತ್ತೆ. ಮುಂಬರುವಂತಹ ಲೋಕ ಚುನಾವಣೆಯಲ್ಲಿ ನಮ್ಮ ಪಕ್ಷ ಜಯಶೀಲರಾಗಬೇಕು ಅನ್ನೋದು ನಮ್ಮೆಲ್ಲರ ಅಭಿಲಾಷೆ ಎಂದು ತಿಳಿಸಿದರು.
ಪಕ್ಷಕ್ಕೆ ಯಾರು ಬೇಕು, ಯಾರು ಬೇಡ ಅಂತ ಪಕ್ಷ ತೀರ್ಮಾನ ಮಾಡುತ್ತೇ, ಅದನ್ನ ಸರ್ಕಾರ ಮಾಡಲ್ಲ. ಪಕ್ಷಕ್ಕೆ ಯಾರು ಬೇಕು ಅಂತ ಪಕ್ಷದ ಮುಖಂಡರು ಚರ್ಚೆ ಮಾಡಿ ತೀರ್ಮಾನ ಮಾಡ್ತಾರೆ. ಚುನಾವಣೆ ಸಂದರ್ಭದಲ್ಲಿ ತಮ್ಮ ಭವಿಷ್ಯ ಕಟ್ಟಿಕೊಳ್ಳೋಕೆ ಪಕ್ಷಾಂತರ ನಡೆಯುತ್ತೆ. ಈ ಪಕ್ಷದಿಂದ ಆ ಪಕ್ಷಕ್ಕೆ ಬರೋರು ,ಹೋಗೋರು ಇದ್ದೆ ಇರ್ತಾರೆ ಎಂದರು.
ಶಿವಮೊಗ್ಗದಲ್ಲಿ ಕಾಂಗ್ರೆಸ್ ಸದೃಢವಾಗಿದೆ. ಪಕ್ಷಕ್ಕೆ ಸೇರಿಸಿಕೊಳ್ಳೋಕೆ ನಾವು ಎಲ್ಲಾ ರೀತಿಯಿಂದಲೂ ವಿಚಾರ ಮಾಡ್ತೇವೆ. ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಅವರ ಅಭಿಪ್ರಾಯ ಕೇಳಿ ಪಕ್ಷ ಮುಂದುವರೆಯುತ್ತೆ. ಯಾರನ್ನಾದ್ರೂ ಪಕ್ಷಕ್ಕೆ ಸೇರಿಸಿಕೊಂಡ್ರೆ ನಮ್ಮ ಪಕ್ಷದಲ್ಲಿರುವ ನಿಷ್ಠಾವಂತರಿಗೆ ತೊಂದರೆ ಆಗಬಾರದು. ಹಾಗಾಗಿ ಎಲ್ಲಾವನ್ನು, ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿರುವವರನ್ನ ಹಿಡಿದಿಟ್ಟುಕೊಳ್ಳಲು ಆಪರೇಶನ್ ಹಸ್ತದ ತಂತ್ರ ಏನು ? ಎಂಬ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ ಬಿಟ್ಟು ಯಾರೂ ಹೋಗೋರಿಲ್ಲ, ಹೋಗ್ತೀನಿ ಅನ್ನುವವರು ಹುಚ್ಚರಷ್ಟೇ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ,ಅಧಿಕಾರದಲ್ಲಿದ್ದಾಗ ಯಾರೂ ಬಿಟ್ಟು ಹೋಗೋದಿಲ್ಲ. ಇದೆಲ್ಲ ಸುಳ್ಳು ಎಂದರು.
ಕಾವೇರಿ ನದಿ ನೀರು ವಿಚಾರವಾಗಿ ಸರ್ವ ಪಕ್ಷ ಸಭೆ ಕರೆದಿದ್ದು ವಿಳಂಬ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ವಿಪಕ್ಷಗಳ ಕೆಲಸಾನೇ ಟೀಕೆ, ವಿರೋಧ ಮಾಡುವುದು. ಅವರೇನು ನಮ್ಮ ಕೆಲಸ ಸಮರ್ಥಿಸಬೇಕು ಅಂತ ಅವರಿಂದ ನಾವು ನಿರೀಕ್ಷೆ ಮಾಡಿರೋದಿಲ್ಲ. ನೀರು ಬಿಡೋದು ನಿಲ್ಲಿಸೋದು ಸರ್ಕಾರದ ಕೈಯಲ್ಲಿಲ್ಲ. ಅದು ಕಾವೇರಿ ವ್ಯಾಲಿ ಅಥಾರಿಟಿಯಲ್ಲಿ ಇದೆ. ಅವರದು ಸಂಪೂರ್ಣ ಟ್ರಿಬ್ಯೂನಲ್ ಅವಾರ್ಡ್ ಇದೆ. ಅದನ್ನ ಸಂಪೂರ್ಣ ಇಂಪ್ಲಿಮಿಂಟ್ ಮಾಡಲು ಪ್ರತ್ಯೇಕ ಎನ್ ಟಿಟಿ ಇದೆ. ಅದರಲ್ಲಿ ಅದನ್ನ ನಿರ್ಣಯ ಮಾಡ್ತಾರೆ. ನೀರು ಬಿಡೋದು, ನಿಲ್ಲಿಸೋದು ಅವರು ತೀರ್ಮಾನ ಮಾಡ್ತಾರೆ ಎಂದು ಹೇಳಿದರು.