ಮುಂಬೈ:ಕೋಲ್ಕತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜು, ಆಸ್ಪತ್ರೆಯ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಘಟನೆ ಬಗ್ಗೆ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲೇ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ 19ವರ್ಷದ ಟ್ರೈನಿ ನರ್ಸ್ ಮೇಲೆ ಆಟೋ ಚಾಲಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.
ಕಾಲೇಜಿನಿಂದ ಮನೆಗೆ ಹಿಂತಿರುಗುತ್ತಿದ್ದ ನರ್ಸಿಂಗ್ ವಿದ್ಯಾರ್ಥಿನಿಯ ಪ್ರಜ್ಞೆ ತಪ್ಪಿಸಿ ರಿಕ್ಷಾ ಚಾಲಕ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಡೆದಿದೆ.
19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಕಾಲೇಜಿನಿಂದ ಮನೆಗೆ ತೆರಳುವ ಸಲುವಾಗಿ ರಿಕ್ಷಾ ಹತ್ತಿದ್ದಳು. ದಾರಿ ಮಧ್ಯೆ ಆಟೋ ಚಾಲಕ ನೀರಿನಲ್ಲಿ ಅಮಲು ಪದಾರ್ಥ ಸೇರಿಸಿ ಆಕೆಗೆ ಕುಡಿಯಲು ನೀಡಿದ್ದಾನೆ. ಇದನ್ನು ಅರಿಯದೆ ನೀರನ್ನು ಕುಡಿದ ವಿದ್ಯಾರ್ಥಿನಿ ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ತಪ್ಪಿದ್ದಾಳೆ. ಬಳಿಕ ಆಕೆಯನ್ನು ಯಾರೂ ಇಲ್ಲದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಲಕ ಅತ್ಯಾಚಾರ ವೆಸಗಿದ್ದಾನೆ.
ಎಚ್ಚರಗೊಂಡ ಬಳಿಕ ಸಂತ್ರಸ್ತೆ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಅಲ್ಲದೇ ಘಟನೆಯ ಕುರಿತು ಆ.26 ರಂದು ಮನೆಯವರೊಂದಿಗೆ ತೆರಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ. ಘಟನೆ ನಡೆದ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ಈ ಘಟನೆಯನ್ನು ಖಂಡಿಸಿ ರತ್ನಗಿರಿಯಲ್ಲಿ ರಸ್ತೆಗಳನ್ನು ತಡೆದು ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದ್ದಾರೆ. ಅಲ್ಲದೇ ರತ್ನಗಿರಿಯ ನರ್ಸಿಂಗ್ ಸಿಬ್ಬಂದಿ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸುತ್ತಿದ್ದು, ಕೃತ್ಯವೆಸಗಿದ ವ್ಯಕಿಯನ್ನು ಬಂಧಿಸಿ ಗಲ್ಲಿಗೇರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.