ಮೈಸೂರು: ಶ್ರೀ ಸುತ್ತೂರು ಮಠದಲ್ಲಿ ಇದೇ ಏಪ್ರಿಲ್ ೨೩ ರಂದು ಮಂಗಳವಾರ ಸಂಜೆ ೬.೦೦ ಗಂಟೆಗೆ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಬೆಳದಿಂಗಳ ಸಂಗೀತ-೨೬೬ರ ಅಂಗವಾಗಿ ವಿದ್ವಾನ್ ಎಂ.ಬಿ. ಹರಿಹರನ್ ಮತ್ತು ವಿದ್ವಾನ್ ಎಸ್. ಅಶೋಕ್‌ರವರಿಂದ ದ್ವಂದ್ವ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ವಿದ್ವಾನ್ ಎಂ.ಬಿ. ಹರಿಹರನ್ ಮತ್ತು ವಿದ್ವಾನ್ ಎಸ್. ಅಶೋಕ್‌ರವರನ್ನು ಬೆಂಗಳೂರು ಸಹೋದರರು ಎಂದು ಹೆಸರಿಸಿದವರು ಗಾನಕಲಾಶ್ರೀ ವಿದ್ವಾನ್ ಎಚ್.ಎಸ್.ಸುಧೀಂದ್ರರವರು. ಶ್ರೀ ಎಂ.ಬಿ. ಹರಿಹರನ್‌ರವರು ವಿದ್ವಾನ್ ಎಸ್.ಎನ್. ಶ್ರೀನಿವಾಸ ಪ್ರಸನ್ನರವರ ಬಳಿ, ಶ್ರೀ ಎಸ್. ಅಶೋಕ್‌ರವರು ವಿದ್ವಾನ್ ಡಿ.ಎಸ್. ಶ್ರೀವತ್ಸ, ವಿದುಷಿ ಶ್ರೀಮತಿ ವೈದೇಹಿ ಮತ್ತು ವಿದ್ವಾನ್ ಕೆ.ಆರ್. ರಮೇಶ್‌ರವರ ಬಳಿ ಸಂಗೀತದ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ವಿಶೇಷವೆಂಬಂತೆ ಇಬ್ಬರೂ ಸಂಗೀತಾಭ್ಯಾಸ ಪ್ರಾರಂಭ ಮಾಡಿದ್ದು ೧೯೮೯ರಲ್ಲಿ. ಅನಂತರ ಸಂಗೀತದ ಉನ್ನತ ಶಿಕ್ಷಣವನ್ನು ಗಾನಕಲಾನಿಧಿ ವಿದ್ವಾನ್ ಸೇಲಂ ಪಿ. ಸುಂದರೇಶನ್‌ರವರ ಬಳಿ ಪಡೆದರು. ಪ್ರಸ್ತುತ ಶ್ರೀ ಎಚ್.ಎಸ್. ಸುಧೀಂದ್ರರವರಲ್ಲಿ ಶಿಷ್ಯವೃತ್ತಿ ಮುಂದುವರಿಸಿದ್ದಾರೆ.
ಇಬ್ಬರು ವಿದ್ವಾಂಸರ ಸಾಮ್ಯತೆಗಳು ಅಚ್ಚರಿ ಹುಟ್ಟಿಸುವಂತಿವೆ. ಇಬ್ಬರೂ ಕರ್ನಾಟಕ ಸಂಗೀತ ದ್ವಂದ್ವ ಗಾಯನದಲ್ಲಿ ಬೆಂಗಳೂರು ಆಕಾಶವಾಣಿಯ ಎ ಶ್ರೇಣಿ ಗಾಯಕರು, ಬಿ.ಇ. (ಮೆಕ್ಯಾನಿಕಲ್) ಪದವೀಧರರು, ಮದ್ರಾಸ್ ವಿಶ್ವವಿದ್ಯಾಲಯದ ಎಂ.ಮ್ಯೂಸಿಕ್ ಪದವೀಧರರು. ಕರ್ನಾಟಕ ಸರ್ಕಾರವು ನಡೆಸುವ ಸಂಗೀತ ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದವರು, ಕನ್ನಡ, ತಮಿಳು, ತೆಲುಗಿನ ಟಿ.ವಿ. ವಾಹಿನಿಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಶ್ರೀ ಎಸ್. ಅಶೋಕ್‌ರವರು ಬೆಂಗಳೂರು ಆಕಾಶವಾಣಿಯ ಎ ಶ್ರೇಣಿ ಮೃದಂಗ ಕಲಾವಿದರೂ ಆಗಿದ್ದಾರೆ. ವಿಷಯಾಧಾರಿತ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿರುವರು. ದ ಪಿಲಿಗ್ರಿಮೇಜ್, ಹರಿದಾಸ ತತ್ವಾಮೃತಂ, ಹರಿದಾಸರ ಮುಂಡಿಗೆಗಳು, ಪುರಂದರದಾಸರ ನವರತ್ನ ಮಾಲಿಕಾ ಮೊದಲಾದ ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ.
ವಯೊಲಿನ್ ಸಹಕಾರ ನೀಡಲಿರುವ ವಿದ್ವಾನ್ ಎಸ್. ಜನಾರ್ಧನ್‌ರವರು ಏಳನೆಯ ವರ್ಷದಲ್ಲಿಯೇ ಸಂಗೀತ ಕಲಿಯಲು ಪ್ರಾರಂಭಿಸಿದ ಪ್ರತಿಭಾವಂತರು. ವಯೊಲಿನ್ ವಾದನದ ಪ್ರಾರಂಭಿಕ ಶಿಕ್ಷಣವನ್ನು ವಿದುಷಿ ಅನುತ್ತಮಾ ಮುರಳಿಯವರ ಬಳಿ ಪಡೆದರು. ಪ್ರಸ್ತುತ ಪದ್ಮಶ್ರೀ ಶ್ರೀಮತಿ ಎ. ಕನ್ಯಾಕುಮಾರಿಯವರ ಬಳಿ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಬಿ-ಹೈ ಶ್ರೇಣಿಯ ಕಲಾವಿದರು. ಕಳೆದ ಹತ್ತಾರು ವರ್ಷಗಳಿಂದಲೂ ಸೋಲೋ ಹಾಗೂ ಪಕ್ಕವಾದ್ಯಗಾರರಾಗಿ ನಾಡಿನಾದ್ಯಂತ ಖ್ಯಾತಿ ಪಡೆದಿದ್ದಾರೆ. ೨೦೨೩ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿ ಸಂಗೀತ ಕಾರ್ಯಕ್ರಮ ಪ್ರಸ್ತುತಿ ಪಡಿಸಿರುವರು.

ಮೃದಂಗ ವಾದನ ನೀಡಲಿರುವ ವಿದ್ವಾನ್ ಎಚ್.ಎಸ್. ಸುಧೀಂದ್ರರವರು ಕರ್ನಾಟಕದ ಹಿರಿಯ ಮೃದಂಗ ವಿದ್ವಾಂಸರ ಪೈಕಿ ಮುಂಚೂಣಿಯಲ್ಲಿರುವರು. ಇವರಿಗೆ ಮೃದಂಗದ ಮೊದಲನೆಯ ಗುರುಗಳು ತಂದೆಯವರಾದ ಶ್ರೀ ಎಚ್. ಶ್ರೀನಿವಾಸರಾವ್ ಮತ್ತು ತಾಯಿ ಶ್ರೀಮತಿ ಇಂದಿರಾರವರು. ಅನಂತರ ವಿದ್ವಾನ್ ಎಂ. ವಾಸುದೇವರಾವ್ ಮತ್ತು ವಿದ್ವಾನ್ ಶ್ರೀಮುಷ್ಣಂ ವಿ. ರಾಜಾರಾವ್‌ರವರ ಬಳಿ ಉನ್ನತ ಶಿಕ್ಷಣ ಪಡೆದರು. ಆಕಾಶವಾಣಿಯ ಎ-ಟಾಪ್ ಶ್ರೇಣಿಯ ಮೃದಂಗ ಕಲಾವಿದರು. ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಪಡೆದ ಹೆಗ್ಗಳಿಕೆ. ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಶಿಷ್ಯವೇತನವನ್ನು, ಸೀನಿಯರ್ ಫೆಲೋಶಿಪ್ ಪಡೆದವರು. ಚೆನ್ನೈನ ಮ್ಯೂಸಿಕ್ ಅಕ್ಯಾಡೆಮಿಯು ಇವರಿಗೆ ಪಳನಿ ಸುಬ್ರಹ್ಮಣ್ಯ ಪಿಳ್ಳೈ ಬಹುಮಾನ ನೀಡಿ ಗೌರವಿಸಿದೆ. ಲಯಕಾಲ ಪ್ರತಿಭಾಮಣಿ, ಗಾನಕಲಾಶ್ರೀ ಪ್ರಶಸ್ತಿಗಳಲ್ಲದೆ ಅವನಿ, ಬೆಂಗಳೂರು ಶಂಕರಮಠಗಳಿಂದ ಆಸ್ಥಾನವಿದ್ವಾನ್ ಪ್ರಶಸ್ತಿಗಳು ಲಭಿಸಿವೆ.
ಘಟಂ ವಾದನ ನೀಡಲಿರುವ ವಿದ್ವಾನ್ ಶಮಿತ್ ಎಸ್. ಗೌಡರವರು ವಿದ್ವಾನ್ ಎಚ್.ಎಲ್. ಶಿವಶಂಕರಸ್ವಾಮಿ ಮತ್ತು ವಿದ್ವಾನ್ ಗಿರಿಧರ್ ಉಡುಪರವರುಗಳ ಶಿಷ್ಯರು. ಕರ್ನಾಟಕ ರಾಜ್ಯಮಟ್ಟದ ತಾಳವಾದ್ಯ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿಯ ವಿದ್ಯಾರ್ಥಿವೇತನ ಪಡೆದ ಪ್ರತಿಭಾನ್ವಿತರು. ಹಲವಾರು ಪ್ರತಿಷ್ಠಿತ ಸಂಗೀತ ವೇದಿಕೆಗಳಲ್ಲಿ ಘಟಂ ವಾದನದ ಪ್ರಸ್ತುತಿಪಡಿಸಿದ್ದಾರೆ. ಮದ್ರಾಸ್ ಮ್ಯೂಸಿಕ್ ಅಕ್ಯಾಡೆಮಿ ಆಯೋಜಿಸಿದ `ಸ್ಪಿರಿಟ್ ಆಫ್ ಯುವಜನೋತ್ಸವ’ದಲ್ಲಿ ಭಾಗವಹಿಸಿದ್ದರು. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ.
ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ಕೋರಿದೆ.
