ಮಂಗಳೂರು(ದಕ್ಷಿಣ ಕನ್ನಡ): ನೇತ್ರಾವತಿ ನದಿಗೆ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೊಬ್ಬರು ನದಿಗೆ ಬಿದ್ದು ನೀರುಪಾಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜಿಲಮೊಗರುವಿನ ಕೂಟೇಲು ಸೇತುವೆ ಸಮೀಪ ನಡೆದಿದೆ.
ಸುರತ್ಕಲ್ ನಿಂದ ಸರಪಾಡಿ ಸಮೀಪದ ಮಾವಿನಕಟ್ಟೆ ಎಂಬಲ್ಲಿನ ನೆಂಟರ ಮನೆಗೆ ಬಂದ ವ್ಯಕ್ತಿಗಳು ಸೇರಿದಂತೆ ನಾಲ್ಕು ಮಂದಿ ನಿನ್ನೆ ಸಂಜೆ ಗಾಳ ಹಾಕಿ ಮೀನು ಹಿಡಿಯಲು ಅಜಿಲಮೊಗರು ಸಮೀಪದ ಕೂಟೇಲು ಸೇತುವೆಯ ಸಮೀಪದ ಕಿಂಡಿ ಅಣೆಕಟ್ಟು ಬಳಿ ಹೋಗಿದ್ರು. ಇದೇ ವೇಳೆ ಮೀನು ಹಿಡಿಯುತ್ತಿರುವ ವೇಳೆ ಮೈಕಲ್ ಎಂಬುವವರು ಆಯತಪ್ಪಿ ನೇತ್ರಾವತಿ ನದಿಗೆ ಬಿದ್ದು ನಾಪತ್ತೆಯಾಗಿದ್ರು. ಭಾರೀ ಮಳೆಯಿಂದ ನದಿ ಉಕ್ಕಿ ಹರಿಯುತಿದ್ದು ದೋಣಿಯ ಮೂಲಕ ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ.
ನಂತರ ಸ್ಥಳೀಯ ಈಜುಗಾರರು ಹಾಗೂ ಬಂಟ್ವಾಳ ಅಗ್ನಿಶಾಮಕ ದಳದವರು ಆಗಮಿಸಿ ಹುಡುಕಾಟ ನಡೆಸಿದರೂ ನೀರಿನ ಹರಿವು ಹೆಚ್ಚಾಗಿದ್ದರಿಂದ ಹಾಗೂ ಕತ್ತಲಾಗಿದ್ದರಿಂದ ಕಾರ್ಯಾಚರಣೆಗೆ ತೊಂದರೆಯಾಗಿತ್ತು. ಹೀಗಾಗಿ ಶುಕ್ರವಾರ ಮತ್ತೆ ನದಿ ನೀರಲ್ಲಿ ಹುಡುಕಾಟ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಲಾಯ್ತು.