ವರದಿ :ಸ್ಟೀಫನ್ ಜೇಮ್ಸ್
ಬೆಳಗಾವಿ
ಬೆಳಗಾವಿ ನಗರ ವೇಗವಾಗಿ ಬೆಳೆಯುತ್ತಿದೆ. ಸಂಚಾರ ಸಮಸ್ಯೆ ಇದ್ದ ಕಡೆಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸಲು ಪಾಲಿಕೆಯಿಂದ ಪಾರ್ಕಿಂಗ್ ಜಾಗ ಗುರುತಿಸಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೂ ಜಾಗದ ವ್ಯವಸ್ಥೆ ಮಾಡಲು ಪಾಲಿಕೆ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗುವುದು ಎಂದು ಮೇಯರ್ ಮಂಗೇಶ್ ಪವಾರ್ ಸೂಚಿಸಿದರು.
ಬುಧವಾರ ಬೆಳಗಾವಿ ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ನಗರದಲ್ಲಿ ಸಂಚಾರ ಸಮಸ್ಯೆಯ ಬಗ್ಗೆ ಪಾಲಿಕೆ ಸದಸ್ಯರು ಚರ್ಚೆ ನಡೆಸಿದ್ದಾರೆ. ಮಾರುಕಟ್ಟೆ ಪ್ರದೇಶದಲ್ಲಿ ವಾಹನ ಸಂಚಾರ ಸಮಸ್ಯೆ ತಗ್ಗಿಸಲು ಪಾರ್ಕಿಂಗ್ ಗೆ ಸಂಚಾರ ಪೊಲೀಸರೊಂದಿಗೆ ಪರ್ಯಾಯ ಜಾಗ ಗುರುತಿಸಲಾಗುವುದು. ಅದೇ ರೀತಿ ಬೀದಿ ಬದಿ ವ್ಯಾಪಾರಿಗಳಿಗೂ ಜಾಗದ ವ್ಯವಸ್ಥೆ ಮಾಡಲು ನಿರ್ಧಾರ ಮಾಡಲಾಗುವುದು ಎಂದರು.
ಪಾಲಿಕೆ ಬಿಜೆಪಿ ಸದಸ್ಯ ಸಂದೀಪ್ ಜೀರಗಿಹಾಳ ಮಾತನಾಡಿ, ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಕಾರ್, ಬೈಕ್ ಬೇಕಾಬಿಟ್ಟಿಯಾಗಿ ರಸ್ತೆಯ ಮೇಲೆ ಪಾರ್ಕಿಂಗ್ ಮಾಡುತ್ತಾರೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಎಐಎಂಐಎಂ ಸದಸ್ಯ ಶಾಹೀನಖಾನ್ ಪಠಾಣ ಮಾತನಾಡಿ, ನಗರದ ಪ್ರತಿಷ್ಠಿತ ಆಸ್ಪತ್ರೆ ಹಾಗೂ ಖಾಸಗಿ ಶಾಲಾ ಕಾಲೇಜಿನ ರಸ್ತೆಯ ಮುಂಭಾಗದಲ್ಲಿ ಅವರ ಸಿಬ್ಬಂದಿಗಳ ಪಾರ್ಕಿಂಗ್ ಮಾಡಿ ಜನರಿಗೆ ತೊಂದರೆ ಮಾಡುತ್ತಿದ್ದಾರೆ. ರಸ್ತೆ ಮೇಲೆ ಪಾರ್ಕಿಂಗ್ ಮಾಡುವ ಸಂಸ್ಥೆಗಳ ಮೇಲೆ ಸಂಚಾರ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಚಾರ ಎಸಿಪಿ ಶಿವಾಜಿ ನಿಕ್ಕಂ ಮಾತನಾಡಿ, ಬೆಳಗಾವಿ ನಗರದಲ್ಲಿ ಫುಟ್ ಪಾತ್ ಅತಿಕ್ರಮಣ ಮಾಡಿಕೊಂಡ ಮಳಿಗೆಯನ್ನು ತೆರವು ಮಾಡಿಕೊಂಡು ಬರಲಾಗುತ್ತಿದೆ. ಫುಟ್ ಪಾತ್ ನಲ್ಲಿ ಗುಂಡಿ ಬಿದ್ದ ಕಡೆಗಳಲ್ಲಿ ಪಾಲಿಕೆ ಸದಸ್ಯರನ್ನು ಕರೆದುಕೊಂಡು ಹೋಗಿ ಪರಿಶೀಲನೆ ಮಾಡಲಾಗಿದೆ. ಅದನ್ನು ಮುಚ್ಚುವ ಕೆಲಸ ಪಾಲಿಕೆಯವರು ಮಾಡಬೇಕು. ಇದನ್ನು ಮಾಡಿದರೆ ಸುಗಮ ಸಂಚಾರ ಮಾಡಲು ಹಾಗೂ ಸಾರ್ವಜನಿಕರ ವಾಹನ ಪಾರ್ಕಿಂಗ್ ಮಾಡಲು ಸುಗಮವಾಗುತ್ತದೆ ಎಂದರು.
ಬೆಳಗಾವಿ ನಗರ ಸೇರಿ ಖಾನಾಪುರ ತಾಲೂಕಿನಲ್ಲಿ 14 ಲಕ್ಷ ವಾಹನಗಳ ಸಂಖ್ಯೆ ಇದೆ. ಬೇಸ್ ಮೆಂಟ್ ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಬಿಟ್ಟು ವ್ಯಾಪಾರ ನಡೆಸುವ ಮಳಿಗೆಗಳಿಗೆ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ನಗರದ ಭರತೇಶ್ ಹಾಗೂ ಸಂಗೊಳ್ಳಿ ರಾಯಣ್ಣ ಕಾಲೇಜ್ ಹೊರತು ಪಡಿಸಿ ಯಾವ ಕಾಲೇಜುಗಳು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಲ್ಲ ಎಂದರು.
ಬೆಳಗಾವಿ ನಗರದಲ್ಲಿ ಫ್ಲೈ ಓವರ್ ರಸ್ತೆ ನಿರ್ಮಾಣವಾಗುತ್ತಿದೆ. ಅದಕ್ಕೆ ಆಗ ನಗರದಲ್ಲಿ ಸಂಚಾರ ಸಮಸ್ಯೆಯಾಗ ಬಹದು. ಅದಕ್ಕೂ ಮುಂಚೆ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಿ ಬಗೆ ಹರಿಸುವ ಪ್ರಯತ್ನ ಮಾಡೋಣ ಎಂದರು.
ತಿನಿಸು ಕಟ್ಟೆ ಆರಂಭಿಸಿ:
ಪಾಲಿಕೆ ಸದಸ್ಯೆ ರೇಷ್ಮಾ ಬೈರಕಾದರ ಮಾತನಾಡಿ, ಕಿಲ್ಲಾ ಕೋಟೆಯ ಕೆರೆಯಲ್ಲಿ ತಿನಿಸು ಕಟ್ಟೆ ಆರಂಭಿಸಿ ಪಾಲಿಕೆಯ ಆದಾಯ ವೃದ್ಧಿಯಾಗಲು ಕ್ರಮ ಕೈಗೊಳ್ಳಬೇಕು ಎಂದರು.
ಮೇಯರ್ ಮಂಗೇಶ್ ಪವಾರ್ ಮಾತನಾಡಿ, ಬೆಳಗಾವಿ ಕಿಲ್ಲಾ ಕೋಟೆಯ ಕರೆಯ ಪಕ್ಕ ಸಾಕಷ್ಟು ಪಾಲಿಕೆಯ ಜಾಗ ಇದೆ. ಅಲ್ಲಿ ತಿನಿಸು ಕಟ್ಟೆ ನಿರ್ಮಾಣ ಮಾಡಿ ಪಾಲಿಕೆಯ ಆದಾಯ ವೃದ್ಧಿ ಮಾಡಿಕೊಳ್ಳಲು ಯೋಜನೆ ರೂಪಿಸುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಮಾಡಲಾಗುವುದು ಎಂದರು.
ಪಾಲಿಕೆ ಆಯುಕ್ತೆ ಶುಭ ಬಿ, ಮಾತನಾಡಿ, ಅಮೃತ ಯೋಜನೆಯಲ್ಲಿ 8 ಕೋಟಿ ರೂ. ಅನುದಾನದಲ್ಲಿ ನಾಲಾ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕೆರೆ ಸಂರಕ್ಷಣೆಗೆ ಮಾತ್ರ ಪಾಲಿಕೆಯಿಂದ ಮಾಡಲಾಗಿದೆ.ಈಗಾಗಲೇ ನಾಲ್ಕು ಮಳಿಗೆ ನಿರ್ಮಾಣ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆಯೂ ಆರಂಭವಾಗಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ರಸಮಂಜರಿ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದರು.
ಇದು ಲೋಕೋಪಯೋಗಿ ಇಲಾಖೆಯ ಅನುಮತಿ ಪಡೆಯಬೇಕಾಗುತ್ತದೆ.
ಇದಕ್ಕೂ ಮುನ್ನ 200ಕ್ಕೂ ಅಧಿಕ ಕೋಟಿ ರೂ. ವ್ಯವಹಾರದ ವಿಷಯದಲ್ಲಿ ಪಾಲಿಕೆ ನಾಮನಿರ್ದೇಶಿತ ಸದಸ್ಯರಿಗೆ ಸಭೆಯಲ್ಲಿ ಮಾತನಾಡುವ ಬಗ್ಗೆ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಪಾಲಿಕೆ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ಬಿಜೆಪಿ ಸದಸ್ಯ ರವಿ ಧೋತ್ರೆ ನಡುವೆ ಮಾತಿನ ಚಕಮಕಿ ನಡೆಯಿತು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂಇಎಸ್ ಸದಸ್ಯರ ಮಾತು ಕೇಳಿ ಆಡಳಿತ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಸದಸ್ಯ ರವಿ ದೋತ್ರೆ ವಿರುದ್ಧ ಎಂಇಎಸ್ ಸದಸ್ಯರು ಮುಗಿ ಬಿದ್ದ ಘಟನೆ ಬುಧವಾರ ನಡೆಸಿದೆ.
ಬೆಳಗಾವಿ ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಕರೆಯಲಾದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಹಾಗೂ ಎಂಇಎಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಸದಸ್ಯ ರವಿ ದೋತ್ರೆ ಸಭೆಯಲ್ಲಿ ಎಂಇಎಸ್ ಸದಸ್ಯರ ಮಾತಿಗೆ ಯಾವುದೇ ಬೆಲೆ ಇಲ್ಲ ಎನ್ನುತ್ತಿದ್ದಂತೆ ಎಂಇಎಸ್ ಸದಸ್ಯ ರವಿ ಸಾಳುಂಕೆ ಆಕ್ಷೇಪ ವ್ಯಕ್ತಪಡಿಸಿ ಜಟಾಪಟಿ ನಡೆಸಿದರು.



