ಚಾಮರಾಜನಗರ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನು ಚಾಮರಾಜನಗರಕ್ಕೆ ನೀಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮಹೇಶ್ ಜೋಶಿಯವರಿಗೆ ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಮನವಿ ಪತ್ರ ಅರ್ಪಿಸಿ, ಚಾಮರಾಜನಗರ ಗಡಿ ಜಿಲ್ಲೆಯಾಗಿದ್ದು ಇದುವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯದೇ ಇರುವ ಜಿಲ್ಲೆಯಾಗಿದೆ. ಜಿಲ್ಲಾ ಕೇಂದ್ರವಾಗಿದ್ದು ಮೂಲಭೂತ ಅಗತ್ಯಗಳ ಸೌಲಭ್ಯಗಳು ಹಾಗೂ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಚಾಮರಾಜನಗರಕ್ಕೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನೀಡಿ ಸಾಹಿತ್ಯ, ಸಂಸ್ಕೃತಿ, ಪರಂಪರೆಗೆ ಹಾಗು ಚಾಮರಾಜನಗರಕ್ಕೆ ವಿಶೇಷ ಗೌರವ ತರಬೇಕೆಂದು ಮನವಿ ಮಾಡಲಾಯಿತು.
ಮನವಿ ಪತ್ರವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶೈಲಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ,ಕೊಳ್ಳೇಗಾಲ ತಾಲೂಕು ಅಧ್ಯಕ್ಷ ನಾಗರಾಜು ಕೊಂಗರಹಳ್ಳಿ, ಸಾಹಿತಿ ಹಾಗೂ ಮಾಜಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸೋಮಶೇಖರಬಿಸಲ್ವಾಡಿ ನೇತೃತ್ವದಲ್ಲಿ ಮನವಿ ಪತ್ರ ಅರ್ಪಿಸಲಾಯಿತು.
ಮನವಿ ಸ್ವೀಕರಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಮಹೇಶ್ ಜೋಶಿ ಅವರು ಮಾತನಾಡಿ ಖಂಡಿತವಾಗಿಯೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಡಿ ಜಿಲ್ಲೆ ಚಾಮರಾಜನಗರದಲ್ಲಿ 2026 ಅಥವಾ 27ಕ್ಕೆ ನಡೆಸಲಾಗುವುದು ಎಂದರು.