ತಮಿಳುನಾಡು: ಶಾಲಾ ಬಸ್ ಚಾಲಕರೊಬ್ಬರಿಗೆ ಕರ್ತವ್ಯದಲ್ಲಿರುವಾಗಲೇ ಹೃದಯಾಘಾತವಾಗಿದ್ದು, ಶಾಲಾ ವಿದ್ಯಾರ್ಥಿಗಳನ್ನು ರಕ್ಷಿಸಿ ಕೊನೆಯುಸಿರೆಳೆದ ಹೃದಯ ವಿದ್ರಾವಕ ಘಟನೆತ ತಮಿಳುನಾಡಿನ ತಿರುಪ್ಪೂರಿನಲ್ಲಿ ನಡೆದಿದೆ.
ತಿರುಪುರ್ ಜಿಲ್ಲೆಯ ಗಂಗೇಯಂ ನಿವಾಸಿ ಮಲಯಪ್ಪನ್ ಖಾಸಗಿ ಶಾಲಾ ಬಸ್ ಚಾಲನೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಅವರ ಸಾಯುವ ಸ್ಥಿತಿಯಲ್ಲಿದ್ದರೂ ಕೂಡ ಮಕ್ಕಳಿಗೆ ಯಾವುದೇ ಹಾನಿಯಾಗಬಾರದೆಂದು ಅವರು ವಾಹನವನ್ನು ರಸ್ತೆಯ ಬದಿಗೆ ತಂದು ನಿಲ್ಲಿಸಿ ತಮ್ಮ ಪ್ರಾಣಬಿಟ್ಟಿದ್ದಾರೆ. ಶಾಲಾ ಬಸ್ ಚಾಲಕನ ಈ ಕಾರ್ಯವು ಅನೇಕ ವಿದ್ಯಾರ್ಥಿಗಳ ಜೀವವನ್ನು ಉಳಿಸಿದೆ.
ಮಲಯಪ್ಪನ್ ಅವರನ್ನು ಆಸ್ಪತ್ರೆ ಕರೆದುಕೊಂಡು ಹೋದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು ಎಂಬುದಾಗಿ ತಿಳಿದುಬಂದಿದೆ. ಅವರ ನಿಸ್ವಾರ್ಥ ಕಾರ್ಯವನ್ನು ವೀರೋಚಿತ ಎಂದು ಶ್ಲಾಘಿಸಲಾಗಿದ್ದು, ಶಾಲಾ ಮಕ್ಕಳ ಸುರಕ್ಷತೆಗಾಗಿ ಅವರ ಸಮರ್ಪಣೆಯನ್ನು ಅನೇಕರು ಹೊಗಳಿದ್ದಾರೆ.
ಈ ಬಸ್ ಚಾಲಕನ ಸಾವಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿದ್ದು, ಸಾವಿನ ಅಂಚಿನಲ್ಲಿದ್ದರೂ ಅವರು ಮಕ್ಕಳ ಜೀವವನ್ನು ಉಳಿಸಿದ್ದಾರೆ ಎಂದು ಹೊಗಳಿದ್ದಾರೆ. ಈ ಘಟನೆಯು ಅವರ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ, ಅನೇಕರು ಮಲಯಪ್ಪನ್ ಅವರ ಧೈರ್ಯಕ್ಕೆ ಗೌರವ ಸಲ್ಲಿಸಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.