Saturday, July 26, 2025
Google search engine

Homeರಾಜ್ಯಸುದ್ದಿಜಾಲಭೀಮನ ಅಮವಾಸ್ಯೆ ದೇಗುಲಗಳಿಗೆ ಹರಿದು ಬಂದ ಭಕ್ತ ಸಾಗರ

ಭೀಮನ ಅಮವಾಸ್ಯೆ ದೇಗುಲಗಳಿಗೆ ಹರಿದು ಬಂದ ಭಕ್ತ ಸಾಗರ

ಯಳಂದೂರು: ತಾಲೂಕಿನ ಪೌರಾಣಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವ ಗಣಿಗನೂರು ನೀಲಕಂಠೇಶ್ವರ ಬೂದಿತಿಟ್ಟು ಮಹದೇಶ್ವರ, ಕಂದಹಳ್ಳಿ ಗ್ರಾಮದ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನವೂ ಸೇರಿದಂತೆ ವಿವಿಧೆಡೆ ಗುರುವಾರ ಭೀಮನ ಅಮಾವಾಸ್ಯೆಯ ನಿಮಿತ್ತ ವಿಶೇಷ ಪೂಜೆ, ರಥೋತ್ಸವ, ಅನ್ನಸಂತರ್ಪಣೆ ಕಾರ್ಯ ಜರುಗಿತು.

ಗಣಿಗನೂರು ಗ್ರಾಮದ ನೀಲಕಂಠೇಶ್ವರ ದೇಗುಲದಲ್ಲಿ ೧೬ ನೇ ವರ್ಷದ ಅನ್ನಸಂತರ್ಪಣೆ ನಡೆಯಿತು. ನೀಲಕಂಠೇಶ್ವರ ದೇವಸ್ಥಾನದಲ್ಲಿ ದೇವರಿಗೆ ಬೆಳಿಗ್ಗೆಯಿಂದಲೇ ರುದ್ರಾಭಿಷೇಕ, ಬಿಲ್ವಾರ್ಚನೆ, ಹಾಗೂ ಮಹಾಮಂಗಳಾರತಿ ನಡೆಯಿತು. ಬೆಳಿಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಹೊರ ರಾಜ್ಯ, ಜಿಲ್ಲೆಗಳಿಂದ ಬಂದಿದ್ದ ಭಕ್ತಾಧಿಗಳು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ಹರಕೆ ಹೊತ್ತ ಭಕ್ತರು ಹುಲಿವಾಹನ ಸೇವೆಯನ್ನು ದೇವರಿಗೆ ಅರ್ಪಿಸಿದರು. ನಂತರ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಯಿತು. ದಂಡುಗೋಲು ಸೇವೆ ಸೇರಿದಂತೆ ಇತರೆ ಸೇವೆಗಳು ಸಾಂಗವಾಗಿ ನೆರವೇರಿದವು. ಈ ವೇಳೆ ನೂರಾರು ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು.

ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ: ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪ್ರತಿ ವರ್ಷ ದೇವಸ್ಥಾನದ ಆವರಣದಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಕಾರ್ಯ ನಡೆಯುತ್ತದೆ. ಅದರಂತೆ ಈ ಭಾರಿಯೂ ಅನ್ನಸಂತರ್ಪಣೆ ಕಾರ್ಯ ನಡೆಯಿತು. ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಜನರು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದರಲ್ಲದೇ ನಂತರ ಆಯೋಜಿಸಿದ್ದ ಅನ್ನಸಂತರ್ಪಣೆಗೆ ಸರತಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು. ಬೆಳಿಗ್ಗೆ ಆರಂಭಗೊಂಡ ಅನ್ನಸಂತರ್ಪಣೆ ಕಾರ್ಯ ಸಂಜೆ ತನಕವೂ ನಿರಾತಂಕವಾಗಿ ಸಾಗಿತು. ಅನ್ನಸಂತರ್ಪಣೆ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯಿಂದಲೇ ಅಡುಗೆ ತಯಾರಿ ಕಾರ್ಯಗಳು ದೇವಸ್ಥಾನದ ಆವರಣದಲ್ಲಿ ನಡೆದಿತ್ತು.

ಹರಿದು ಬಂದ ಭಕ್ತ ಸಾಗರ: ಬೆಳಿಗ್ಗೆಯಿಂದಲೇ ಯಳಂದೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ವಿವಿಧ ಜಿಲ್ಲೆಯ ಗ್ರಾಮಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರವಾಹನಗಳು, ಆಟೋಗಳ ಮೂಲಕ ಬರಲಾರಂಬಿಸಿದರು. ಪಟ್ಟಣದಿಂದ ವಿವಿಧೆಡೆ ಆಚರಣೆ: ಭೀಮನ ಅಮಾವಾಸ್ಯೆ ಪ್ರಯುಕ್ತ ತಾಲೂಕಿನ ಕಂದಹಳ್ಳಿ, ಅಗರ, ಮಾಂಬಳ್ಳಿ, ಕೆಸ್ತೂರು, ಗುಂಬಳ್ಳಿ, ಬೂದಿತಿಟ್ಟು, ಆಮೆಕೆರೆ ರಸ್ತೆ ಬಳಿಯ ಮಹದೇಶ್ವರ, ಶಿವ ದೇಗುಲಗಳಲ್ಲಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಇದಕ್ಕಾಗಿಯೇ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

RELATED ARTICLES
- Advertisment -
Google search engine

Most Popular