Friday, April 18, 2025
Google search engine

Homeಸ್ಥಳೀಯಶಿಸ್ತು ಮತ್ತು ಒಗ್ಗಟ್ಟಿನೊಂದಿಗೆ ಅಧ್ಯಾತ್ಮದ ಪ್ರಜ್ಞೆಯು ವಿದ್ಯಾರ್ಥಿಗಳಿಗೆ ಅಗತ್ಯ : ಕರ್ನಲ್ ರೋಹಿತ್ ಠಾಕೂರ್

ಶಿಸ್ತು ಮತ್ತು ಒಗ್ಗಟ್ಟಿನೊಂದಿಗೆ ಅಧ್ಯಾತ್ಮದ ಪ್ರಜ್ಞೆಯು ವಿದ್ಯಾರ್ಥಿಗಳಿಗೆ ಅಗತ್ಯ : ಕರ್ನಲ್ ರೋಹಿತ್ ಠಾಕೂರ್

ಮೈಸೂರು: ರಾಷ್ಟ್ರೀಯ ಜೀವನದಲ್ಲಿ ಯುವ ಜನತೆಯ ಪಾತ್ರ ದೊಡ್ಡದು, ದೇಶದ ಅಭಿವೃದ್ಧಿಯಲ್ಲಿ ಯುವಜನತೆ ಹಲವು ನೆಲೆಗಳಲ್ಲಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಮೈಸೂರು ಶ್ರೀ ಸುತ್ತೂರು ಮಠದಲ್ಲಿ ೨೦೨೪ರ ಗಣರಾಜ್ಯೋತ್ಸವ, ರಾಷ್ಟ್ರಮಟ್ಟದ ಶಿಬಿರ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಿದ ಮೈಸೂರು ವಿಭಾಗದ ಎನ್‌ಸಿಸಿ ಕೆಡೆಟ್‌ಗಳಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಕರ್ನಲ್ ರೋಹಿತ್ ಠಾಕೂರ್‌ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ತಿಳಿಸಿದರು.

ಎನ್‌ಸಿಸಿ ಕೆಡೆಟ್‌ಗಳಿಗೆ ಶಿಸ್ತು ಮತ್ತು ಒಗ್ಗಟ್ಟಿನೊಂದಿಗೆ ಅಧ್ಯಾತ್ಮದ ಪ್ರಜ್ಞೆಯು ಅಗತ್ಯ. ಅಧ್ಯಾತ್ಮದ ಅನುಭವ ಜೀವನದಲ್ಲಿ ಸರಿ ತಪ್ಪುಗಳ ವಿವೇಚನೆ ಮಾಡುವುದಕ್ಕೆ ಸಹಕಾರಿ. ದೇಶವನ್ನು ಅಧ್ಯಾತ್ಮದ ಅನುಭವವು ಸದೃಢಗೊಳಿಸುತ್ತಾ ಬಂದಿದೆ. have participated ದೇಶ ಕಟ್ಟುವ ನಿಟ್ಟಿನಲ್ಲಿ ಹಿರಿಯರ ಪರಿಶ್ರಮವಿದೆ. ಯುವಜನತೆ ಮತ್ತು ಎನ್‌ಸಿಸಿ ಕೆಡೆಟ್‌ಗಳು ಇದನ್ನು ಅರಿತು ಸದೃಢ ದೇಶಕಟ್ಟುವಲ್ಲಿ ಭವಿಷ್ಯದ ಹೆಜ್ಜೆಗಳ ಬಗ್ಗೆ ಚಿಂತಿಸಬೇಕು. ದೇಶಪ್ರೇಮಿಗಳಿಂದ ಮಾತ್ರ ದೇಶದ ಸುಭದ್ರತೆ ಸಾಧ್ಯ. ಆದರೆ ಇಂದು ಸೇನೆಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಪರ್ಯಾಸ. ಈ ದಿಸೆಯಲ್ಲಿ ನಾವೆಲ್ಲ ಆಲೋಚಿಸಬೇಕಿದೆ ಎಂದು ಹೇಳಿದರು.

ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿ ಎನ್‌ಸಿಸಿಯು ವಿದ್ಯಾರ್ಥಿಗಳಿಗೆ ರಾಷ್ಟ್ರಭಕ್ತಿಯನ್ನು ಮತ್ತು ಶಿಸ್ತನ್ನು ಬೆಳಸುವ ಅತ್ಯುತ್ತಮ ಮಾಧ್ಯಮವಾಗಿದೆ. ದೇಶ ಮತ್ತು ಗುರು ಹಿರಿಯರ ಮೇಲೆ ಗೌರವ ಮತ್ತು ಭಕ್ತಿಯ ಭಾವ ಸಹಜವಾಗಿ ಮೂಡುವಂತೆ ಮಾಡುತ್ತದೆ. ಎನ್‌ಸಿಸಿಯಲ್ಲಿ ಎಲ್ಲಾ ಮಟ್ಟದ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ಅತ್ಯುತ್ತಮವಾದ ಸಾಧನೆಗಳನ್ನು ಮಾಡಿ ವಿಶೇಷ ಅನುಭವಗಳನ್ನು ಮತ್ತು ಆತ್ಮವಿಶ್ವಾಸವನ್ನು ಪಡೆದುಕೊಂಡಿದ್ದಾರೆ. ಇದು ಇತರ ವಿದ್ಯಾರ್ಥಿಗಳಿಗೆ ಪ್ರೇರಕವಾಗಲಿ. ಇದರಿಂದ ಅವರ ಶೈಕ್ಷಣಿಕ ಮತ್ತು ರಾಷ್ಟ್ರೀಯ ಜೀವನ ಉನ್ನತವಾಗಲಿದೆ. ನಮ್ಮ ದೇಶದ ಆಧ್ಯಾತ್ಮಿಕ ಸಂಪತ್ತು ದೊಡ್ಡದು. ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆ ಭಾರತೀಯರಲ್ಲಿ ರಕ್ತಗತವಾಗಿರುತ್ತದೆ. ಅಧ್ಯಾತ್ಮದಲ್ಲಿ ಸಾಗಿದಾಗ ಎಲ್ಲರೂ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ತಿಳಿಸಿದರು.

ಜೆಎಸ್‌ಎಸ್ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ. ಸಾಂಬಶಿವಯ್ಯನವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತ ಕೋರುತ್ತಾ ಸುತ್ತೂರು ಶ್ರೀಮಠವು ಸಮಾಜದ ಶ್ರೇಯೋಭಿವೃದ್ಧಿಗಾಗಿ ಹಲವು ನೆಲೆಗಳಲ್ಲಿ ಶ್ರಮಿಸುತ್ತಿದೆ. ಜೆಎಸ್‌ಎಸ್ ಮಹಾವಿದ್ಯಾಪೀಠದ ಅಡಿಯಲ್ಲಿ ೩೦೦ ಕ್ಕೂ ಅಧಿಕ ಸಂಸ್ಥೆಗಳನ್ನು ಸ್ಥಾಪಿಸಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರೋಗ್ಯ – ಹೀಗೆ ನಾನಾ ಕ್ಷೇತ್ರಗಳಲ್ಲಿ ಅವಿರತವಾಗಿ ಸೇವೆಯನ್ನು ಸಲ್ಲಿಸುತ್ತಿದೆ. ಎನ್‌ಸಿಸಿ ಕೆಡೆಟ್‌ಗಳನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಪರಮಪೂಜ್ಯರ ಆಶೀರ್ವಾದದಂತೆ ಈ ಕಾರ್ಯಕ್ರಮವನ್ನು ೨೦೨೨ ರಿಂದ ಪ್ರತಿವರ್ಷ ಹಮ್ಮಿಕೊಳ್ಳಲಾಗುತ್ತಿದೆ. ಒಂದು ವರ್ಷದ ಅವಧಿಯಲ್ಲಿ ಎನ್‌ಸಿಸಿ ಕೆಡೆಟ್‌ಗಳು ಮಾಡಿದ ಸಾಧನೆಯನ್ನು ಪರಿಗಣಿಸಿ ಅವರನ್ನು ಅಭಿನಂದಿಸಲಾಗುತ್ತಿದೆ. ಎನ್‌ಸಿಸಿ ವಿಶ್ವದ ಅತಿದೊಡ್ಡ ಯುವಸಂಘಟನೆಯಾಗಿದ್ದು, ಯುವ ನಾಗರಿಕರಲ್ಲಿ ಶಿಸ್ತು, ಹೊಂದಾಣಿಕೆ, ಪರಸ್ಪರ ಸಹಕಾರ, ಜಾತ್ಯತೀತ ದೃಷ್ಟಿಕೋನ, ಸಾಹಸದ ಮನೋಭಾವ ಮತ್ತು ನಿಸ್ವಾರ್ಥ ಸೇವೆಯ ಆದರ್ಶಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಎನ್‌ಸಿಸಿ ಹೊಂದಿದೆ. ಎನ್‌ಸಿಸಿ ರಾಷ್ಟ್ರ ಸೇವೆಯಲ್ಲಿ ೭೫ ವರ್ಷಗಳನ್ನು ಪೂರೈಸಿದೆ.

ದೆಹಲಿಯ ಗಣರಾಜ್ಯೋತ್ಸವದ ಶಿಬಿರದಲ್ಲಿ ೨೨ ಕೆಡೆಟ್‌ಗಳು; ಥಾಲ್ ಸೈನಿಕ್ ಶಿಬಿರದಲ್ಲಿ ೧೬ ಹುಡುಗರು ಮತ್ತು ೨೨ ಹುಡುಗಿಯರು; ಅಖಿಲ ಭಾರತ ನೌಕ ಸೈನಿಕ ಶಿಬಿರದಲ್ಲಿ ೬ ಕೆಡೆಟ್‌ಗಳು; ಅಖಿಲ ಭಾರತ ವಾಯು ಸೈನಿಕ ಶಿಬಿರದಲ್ಲಿ ೩ ಕೆಡೆಟ್‌ಗಳು ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಈ ಅಭಿನಂದನಾ ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ನಡೆದ ೭೫ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದ ೨೨ ಕೆಡೆಟ್‌ಗಳನ್ನು ಒಳಗೊಂಡಂತೆ ಶಿಬಿರ, ಭೂ, ಜಲ ಮತ್ತು ವಾಯು ಸೈನಿಕ ಶಿಬಿರಗಳಲ್ಲಿ ಭಾಗವಹಿಸಿದ ೬೯ ಶಿಬಿರಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಅಭಿನಂದಿತ ಕೆಡೆಟ್‌ಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕುಮಾರಿ ಎ.ಆರ್. ಸುಷ್ಮಿತಾ ಮತ್ತು ಆರ್. ಕುಸುಮಾಬಾಯಿ ಪ್ರಾರ್ಥಿಸಿದರು. ಜೆಎಸ್‌ಎಸ್ ಕಾನೂನು ಕಾಲೇಜಿನ ಪ್ರಾಧ್ಯಾಪಕರಾದ ವಾಣಿಶ್ರೀ ವಂದಿಸಿದರು. ಜೆಎಸ್‌ಎಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಎಲ್. ವಿನಯ್‌ಕುಮಾರ್ ನಿರೂಪಿಸಿದರು.

RELATED ARTICLES
- Advertisment -
Google search engine

Most Popular