ಶಿವಮೊಗ್ಗ: ತರಬೇತಿ ವಿಮಾನದಿಂದ ಕೆಳಗೆ ಹಾರಿದಾಗ ಪ್ಯಾರಾಚೂಟ್ ತೆರೆದುಕೊಳ್ಳದೆ ಹೊಸನಗರ ತಾಲೂಕಿನ ಸಂಕೂರು ಗ್ರಾಮದ ಭಾರತೀಯ ವಾಯುಪಡೆಯ ವಾರೆಂಟ್ ಅಧಿಕಾರಿ ಜಿ.ಎಸ್.ಮಂಜುನಾಥ್ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಆಗ್ರಾದಲ್ಲಿರುವ ಪ್ಯಾರಾಟೂಪರ್ ತರಬೇತಿ ಶಾಲೆಯಲ್ಲಿ ಶುಕ್ರವಾರ ತರಬೇತಿ ಸಮಯದಲ್ಲಿ ದುರಂತ ಸಂಭವಿಸಿದೆ.
ಆಗ್ರಾದಲ್ಲಿ ಭಾರತೀಯ ವಾಯು ಸೇನೆಗೆ ಸೇರಿದ ಮಾಲ್ಪುರ ಪ್ಯಾರಾಚೂಟ್ ಡ್ರಾಪ್ ಜೋನ್‌ನಲ್ಲಿ ಶುಕ್ರವಾರ ಬೆಳಗ್ಗೆ 8.30ರ ಸುಮಾರಿಗೆ ತರಬೇತಿ ನಡೆಯುತ್ತಿತ್ತು. 12 ಅಧಿಕಾರಿಗಳು ಪ್ಯಾರಾಚೂಟ್ ತರಬೇತಿಗೆ ಸಾರಿಗೆ/ಸರಕು ವಿಮಾನವಾದ ಎಎನ್-32 ನಿಂದ ಜಿಗಿದಿದ್ದರು. 11 ಮಂದಿ ಪ್ಯಾರಾಚೂಟ್ ಬಳಸಿ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ. ಆದರೆ ವಾರಂಟ್ ಆಫೀಸರ್ ಜಿ.ಎಸ್. ಮಂಜುನಾಥ್ ನಾಪತ್ತೆಯಾಗಿದ್ದರು. ಬಳಿಕ ಹುಡುಕಾಟ ನಡೆಸಿದಾಗ ಪಿಟಿಎಸ್ ಬಳಿಯ ಗೋಧಿ ಹೊಲದಲ್ಲಿ ಪತ್ತೆಯಾಗಿದ್ದಾರೆ’ ಎಂದು ಐಎಎಫ್ ಆಗ್ರಾ ಪೊಲೀಸರಿಗೆ ಅಧಿಕೃತ ಹೇಳಿಕೆಯಲ್ಲಿ ವಿವರಿಸಿದೆ.
‘ವ್ಯಾಪಕ ಹುಡುಕಾಟದ ನಂತರ, ಅವರು ಮಾಲ್ಪುರ ಮಿತಿಯ ಸುತೇಂದಿಯಲ್ಲಿರುವ ಗೋಧಿ ಹೊಲದಲ್ಲಿ ಪತ್ತೆಯಾಗಿದ್ದರು. ತೀವ್ರವಾಗಿ ಗಾಯಗೊಂಡ ಅವರನ್ನು ಅಂಬ್ಯುಲೆನ್ಸ್ ಸಹಾಯದಿಂದ ಐಎಎಫ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರಿಶೀಲಿಸಿದ ವೈದ್ಯರು ಅವರು ಸಾವನ್ನಪ್ಪಿರುವುದಾಗಿ ಖಚಿತಪಡಿಸಿದರು. ವಿಮಾನದಿಂದ ಹಾರಿದ ನಂತರ ಅವರ ಪ್ಯಾರಾಚೂಟ್ ತೆರೆಯಲಿಲ್ಲ. ಹೀಗಾಗಿ ದುರಂತ ಸಂಭವಿಸಿದೆ.’
ಮೃತ ಮಂಜುನಾಥ್ ಪತ್ನಿ, ತಂದೆ, ತಾಯಿ, ಇಬ್ಬರು ಸಹೋದರಿಯರು, ಒಬ್ಬ ಸಹೋದರನನ್ನು ಅಗಲಿದ್ದಾರೆ. ಮಂಜುನಾಥ್ ಸಾಗರದಲ್ಲಿ ಪಿಯುಸಿ ಪೂರ್ಣಗೊಳಿಸಿ, ಬಳಿಕ ಭಾರತೀಯ ವಾಯು ಸೇನೆಗೆ ಸೇರಿದ್ದರು. ವೈ ಗ್ರೇಡ್ ಅಧಿಕಾರಿಯಾಗಿದ್ದ ಮಂಜುನಾಥ್, ಅಸ್ಸಾಂನಲ್ಲಿ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಸ್ಸಾಂ ಮೂಲದ ಯುವತಿಯನ್ನು ಮದುವೆಯಗಿದ್ದರು. ಘಟನೆ ಬಗ್ಗೆ ಶುಕ್ರವಾರ ಮಧ್ಯಾಹ್ನ ಮಂಜುನಾಥ್ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಶನಿವಾರ ತಡರಾತ್ರಿ ಅವರ ಪಾರ್ಥೀವ ಶರೀರ ಹೊಸನಗರಕ್ಕೆ ರವಾನೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
‘ತರಬೇತಿ ಸಮಯದಲ್ಲಿ ಸೈನಿಕರು ಸಾಮಾನ್ಯವಾಗಿ ಎರಡು ಪ್ಯಾರಾಚೂಟ್‌ಗಳನ್ನು ಕೊಂಡೊಯ್ಯುತ್ತಾರೆ. ಮುಖ್ಯ ಪ್ಯಾರಾಚೂಟ್ ಐದು ಸೆಕೆಂಡುಗಳಲ್ಲಿ ಸ್ಥಿರ ಲೈನ್ ಜಂಪ್‌ನಲ್ಲಿ ಮತ್ತು 1,500 ಅಡಿ ಎತ್ತರದಲ್ಲಿ ಫ್ರೀ ಫಾಲ್‌ನಲ್ಲಿ ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತದೆ. ಇನ್ನೊಂದು ಪ್ಯಾರಾಚೂಟ್ ಸ್ವಯಂಚಾಲಿತವಾಗಿ ತೆರೆದುಕೊಳ್ಳುವುದಿಲ್ಲ. ಇದು ಆಪತ್ತಿನ ಸಂದರ್ಭದಲ್ಲಿ ನೆರವಾಗುತ್ತದೆ. ಐಎಎಫ್ ಜೂನಿಯರ್ ವಾರೆಂಟ್ ಅಧಿಕಾರಿ ಸಾವನ್ನಪ್ಪಿರುವುದು ಅಪರೂಪದ ಪ್ರಕರಣವಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಐಎಎಫ್ ತಜ್ಞರು ಪ್ಯಾರಾಚೂಟ್ ಲಾಕ್‌ಗಳು ಮತ್ತು ಇತರ ಕಾರಣಗಳನ್ನು ಪರಿಶೀಲಿಸುತ್ತಾರೆ’ ಎಂದು ಪ್ಯಾರಾಚೂಟ್ ರೆಜಿಮೆಂಟ್‌ನ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.