ಮೈಸೂರು: ಗ್ರಾಹಕರ ಜಾಗೃತಿಯಿಂದ ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಕರ್ನಾಟಕ ಪ್ರಾಂತದ ಕಾರ್ಯದರ್ಶಿ ಗಾಯತ್ರಿ ನಾಡಿಗ್ ತಿಳಿಸಿದರು.
ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಮಾಧವ ಕೃಪಾದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ನಡೆದ ಗ್ರಾಹಕರ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಹುಟ್ಟಿದ ಮಗುವಿನಿಂದ ಸಾಯುವ ವ್ಯಕ್ತಿಯವರಿಗೆ ಎಲ್ಲರೂ ಗ್ರಾಹಕರೇ. ಸಮಾಜದಲ್ಲಿ ಒಬ್ಬರನ್ನೊಬ್ಬರು ಅವಲಂಬಿಸಿರುವುದರಿಂದ ದಿನನಿತ್ಯದ ಜೀವನಕ್ಕೆ ಅವಶ್ಯವಾದ ವಸ್ತುಗಳನ್ನು ಖರೀದಿಸುವಾಗ ನಡೆಯುವ ಮೋಸ, ವಂಚನೆಗೆ ಒಳಗಾಗುವುದನ್ನು ತಡೆಯಲು ಜಾಗೃತರಾಗಬೇಕು. ಪ್ರತಿಯೊಬ್ಬ ಗ್ರಾಹಕರು ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸಂಘಟನೆ ಬಗ್ಗೆ ಚರ್ಚಿಸಲಾಯಿತು, ಗ್ರಾಹಕ ಪಂಚಾಯತ ದೈಯೋಶಗಳನ್ನು ವಿವರಿಸಿದರು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಡಾ.ಜಿ.ವಿ.ರವಿಶಂಕರ್, ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಕಾರ್ಯದರ್ಶಿ ರಾಘವೇಂದ್ರ, ಸರ್ಕಾರಿ ನಿವೃತ್ತ ನೌಕರ ಚಂದ್ರಶೇಖರ್, ಎಂ.ಪಿ.ಸುಬ್ಬರಾವ್, ಜಯಕುಮಾರ್, ರಮೇಶ್ ನಾಯ್ಡು, ಮಹಿಳಾ ಪ್ರಮುಖ ನಾಗಮಣಿ, ಆನಂದ್, ಶಿವಕುಮಾರ್, ವಿನೋದ್ ಕುಮಾರ್, ಸೇರಿದಂತೆ ಹಲವರು ಭಾಗವಹಿಸಿದ್ದರು.