ಗುಂಡ್ಲುಪೇಟೆ: ತಾಲೂಕಿನ ಬೊಮ್ಮಲಾಪುರ ಗ್ರಾಮದಿಂದ ಅಂಕಹಳ್ಳಿ ಗ್ರಾಮಕ್ಕೆ ಹಾದು ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಮುಳ್ಳಿನ ಪೊದೆಗಳು ಬೆಳೆದು ನಿಂತಿದ್ದು, ವಾಹನ ಸಂಚಾರಕ್ಕೆ ಅಡಚರಣೆ ಉಂಟಾಗಿದೆ.
ಬೊಮ್ಮಲಾಪುರ-ಅಂಕಹಳ್ಳಿ ಮಾರ್ಗದ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿದ್ದು, ಮುಳ್ಳಿನ ಪೊದೆಗಳು ರಸ್ತೆಗೆ ಚಾಚಿ ನಿಂತಿರುವ ಕಾರಣ ಎದುರು ಬರುವ ವಾಹನಗಳು ಕಾಣದಂತಾಗಿದೆ. ಇದರಿಂದ ಕೆಲವು ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಬಾಚಹಳ್ಳಿ, ಯರಿಯೂರು ಗ್ರಾಮಗಳಿಗೆ ಅಂಕಹಳ್ಳಿ ರಸ್ತೆಯ ಮೂಲಕ ತೆರಳಬೇಕಾಗಿದ್ದು, ಅಧಿಕ ಮಂದಿ ರೈತರು ಆಟೋಗಳ ಮೂಲಕ ತರಕಾರಿ ತುಂಬಿಕೊಂಡು ಮಾರುಕಟ್ಟೆಗೆ ಹೋಗುತ್ತಾರೆ. ಆದರೆ ರಸೆ ಬದಿ ಮುಳ್ಳಿನ ಪೊದೆ ಬೆಳೆದು ನಿಂತಿರುವುದರಿಂದ ಆಟೋ ಚಾಲಕರು ಹಾಗೂ ರೈತರಿಗೂ ಕೂಡ ಸಮಸ್ಯೆ ತಲೆದೋರಿದೆ.
ರಸ್ತೆಯ ಇಕ್ಕೆಲಗಳಲ್ಲಿ ಮುಳ್ಳಿನ ಪೊದೆಗಳು ಚಾಚಿ ನಿಂತಿದ್ದರು ಕೂಡ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಹಾಗು ಅಧಿಕಾರಿಗಳು ತೆರವಿಗೆ ಮುಂದಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಕೂಡಲೇ ಮುಳ್ಳಿನ ಪೊದೆಗಳ ತೆರವಿಗೆ ಮುಂದಾಗದಿದ್ದರೆ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಅಂಕಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಮಹೇಂದ್ರ ಎಚ್ಚರಿಕೆ ನೀಡಿದ್ದಾರೆ.