ಬೆಳಗಾವಿ: ಚಲಿಸುತ್ತಿದ್ದ ಕಾರಿನ ಮೇಲೆ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಬೆಳಗಾವಿ ಹೊರವಲಯದ ಸುವರ್ಣಸೌಧದ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ಹುಬ್ಬಳ್ಳಿಯ ಲಕ್ಷ್ಮಿನಗರದ ನಿವಾಸಿ ಗಿರೀಶ್ ಕುಲಕರ್ಣಿ(24) ಎಂದು ಗುರುತಿಸಲಾಗಿದೆ.
ಬೆಳಗಾವಿ ಹೊರವಲಯದ ಸುವರ್ಣಸೌಧದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ಬೆಳಗಾವಿಗೆ ಬರ್ತ್ಡೇ ಪಾರ್ಟಿಗೆಂದು ಮೂವರು ಯುವಕರು ಬಂದಿದ್ದರು. ಪಾರ್ಟಿ ಮುಗಿಸಿ ಮರಳಿ ಹುಬ್ಬಳ್ಳಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಪಕ್ಕದಲ್ಲಿ ಚಲಿಸುತ್ತಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್ ಏಕಾಏಕಿ ಕಾರಿನ ಕಡೆ ವಾಲಿ ಪಲ್ಟಿ ಹೊಡೆದಿದೆ.
ಪಲ್ಟಿ ಹೊಡೆದ ಪರಿಣಾಮ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪ್ರಥಮ್ ಎಂಬಾತ ಗಂಭೀರ ಗಾಯಗೊಂಡಿದ್ದಾನೆ. ಸದ್ಯ ಯುವಕನ ಸ್ಥಿತಿ ಗಂಭೀರ, ಮತ್ತೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಟ್ರ್ಯಾಕ್ಟರ್‌ನಲ್ಲಿ ಓವರ್ ಲೋಡ್ ಆಗಿ ಕಬ್ಬು ತುಂಬಿದ್ದ ಪರಿಣಾಮ ಈ ಅವಘಡ ಸಂಭವಿಸಿದ್ದು, ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.