ಮೈಸೂರು: ಬ್ಯೂಟಿಷಿಯನ್ ಮತ್ತು ಹೊಲಿಗೆ ವೃತ್ತಿಗೆ ಸಮಾಜದಲ್ಲಿ ಉತ್ತಮ ಅವಕಾಶಗಳು ದೊರೆಯುತ್ತಿವೆ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಅರ್ಥಶಾಸ ವಿಭಾಗದ ಪ್ರಾಧ್ಯಾಪಕಿ ಡಾ.ಆರ್.ಎಚ್.ಪವಿತ್ರ ಹೇಳಿದರು.
ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ವಿಶ್ವ ಬ್ಯೂಟಿಷಿಯನ್ ದಿನದ ಅಂಗವಾಗಿ ಶ್ರೀ ದುರ್ಗಾ ಫೌಂಡೇಶನ್ ಹಾಗೂ ಶಿವಮೊಗ್ಗ ಬ್ಯೂಟಿಷಿಯನ್ ಅಸೋಸಿಯೇಷನ್ ವತಿಯಿಂದ ೨೦ ವರ್ಷದಿಂದ ಬ್ಯೂಟಿಷಿಯನ್ ವೃತ್ತಿ ಮಾಡುತ್ತಾ ಬಂದಿರುವ ಹಿರಿಯ ಬ್ಯೂಟಿಷಿಯನ್‌ಗಳಾದ ಮಾಲತಿ, ಆರ್.ವಿನುತಾ, ಚೈತ್ರ ಮಹೇಶ್, ಟಿ.ಎನ್.ಗಂಗಾಂಬಿಕಾ, ಸುಮ ನಾಯ್ಡು ಅವರಿಗೆ ಸನ್ಮಾನಿಸಲಾಯಿತು. ನಂತರ ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಿ ಅವರು ಮಾತನಾಡಿದರು.
ಎಲ್ಲರಿಗೂ ಸರಕಾರಿ ಉದ್ಯೋಗ ದೊರೆಯಲು ಸಾಧ್ಯವಿಲ್ಲ. ಹೀಗಾಗಿ ಸ್ವ-ಉದ್ಯೋಗ ಪ್ರಾರಂಭಿಸಿ ಸಮಾಜದ ಇನ್ನಷ್ಟು ಮಂದಿಗೆ ಉದ್ಯೋಗ ನೀಡುವ ಮೂಲಕ ಮಾದರಿಯಾಗಿರಬೇಕು. ಹೆಣ್ಣು ಮಕ್ಕಳಿಗೆ ತಾನು ಸುಂದರವಾಗಿರಬೇಕೆನ್ನುವ ಹಂಬಲವಿದೆ. ದೇವರು ಕೊಟ್ಟ ನಮ್ಮ ರೂಪಕ್ಕೆ ಮೆರುಗು ಕೊಡುವ ಕೆಲಸ ಬ್ಯೂಟಿ ಪಾರ್ಲರ್‌ಗಳ ಮೂಲಕ ನಡೆಯುತ್ತಿದೆ. ತಾನು ಕಲಿತ ವಿದ್ಯೆಯನ್ನು ಆಧರಿಸಿ ಸ್ವ ಉದ್ಯೋಗ ಆರಂಭಿಸಿರುವ ಮಹಿಳೆಯರ ಸಾಧನೆ ಶ್ಲಾಘಿಸಿದರು.
ಶಿವಮೊಗ್ಗ ಬ್ಯೂಟಿಷಿಯನ್ ಅಸೋಸಿಯೇಷನ್ ಅಧ್ಯಕ್ಷೆ ಅಶ್ವಿನಿ ಪಿ.ಗೌಡ ಮಾತನಾಡಿ, ಮಹಿಳೆಯರು ಸಹ ಬ್ಯೂಟಿಷಿಯನ್ ಕೇಂದ್ರಗಳನ್ನು ತೆರೆದು ಮಹಿಳೆಯರು ಮತ್ತು ಮಕ್ಕಳಿಗೆ ಕೇಶ ವಿನ್ಯಾಸ-ಮೆಹಂದಿ ಹಾಕುವ ಮೂಲಕ ಹೊಸರೂಪ ನೀಡಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಬ್ಯೂಟಿಷಿಯನ್ ಮಾರ್ಗ ಸಹಕಾರಿಯಾಗಿದ್ದು, ಗ್ರಾಹಕರ ಸಂತೃಪ್ತಿಯೇ ನಮ್ಮ ಧ್ಯೇಯ, ಹೀಗಾಗಿ ಗ್ರಾಹಕರಿಗೆ ತೃಪ್ತಿಕರ ಸೇವೆ ನೀಡಬೇಕು ಎಂದು ಹೇಳಿದರು.
ನಾಗವಾಲ ಪಿಡಿಒ ಡಾ.ಶೋಭಾ ರಾಣಿ ಮಾತನಾಡಿ, ೨೧ನೇ ಶತಮಾನದ ವೈಜ್ಞಾನಿಕ ಯುಗದಲ್ಲಿ ಮಹಿಳೆ ಪುರುಷನಷ್ಟೇ ಸಮರ್ಥಳು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ನಗರ-ಗ್ರಾಮೀಣ ಪ್ರದೇಶವೆನ್ನದೆ ಸೌಂದರ್ಯಪ್ರಜ್ಞೆ ಎಲ್ಲ ವಯೋಮಾನದ ಮಹಿಳೆಯರಲ್ಲಿ ಮೂಡುತ್ತಿದೆ. ಬ್ಯೂಟಿ ಪಾರ್ಲರ್ ಉದ್ಯಮ ಬೇಡಿಕೆಯ ಉದ್ಯಮವಾಗಿದೆ. ಮಹಿಳೆಯರು ಕೂಡ ಯಶಸ್ವಿ ಉದ್ಯಮಿಗಳಾಗಲು ಅವಕಾಶ ಇದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಉಪಾಧ್ಯಕ್ಷೆ ವಿದ್ಯಾ, ಮೈಸೂರು ಬ್ಯೂಟಿಷಿಯನ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷೆ ವೇದಾ ರೈ, ಉಪಾಧ್ಯಕ್ಷೆ ಅಹಲ್ಯ, ಮೈಸೂರು ನಗರ ಪೊಲೀಸ್ ಟ್ರಾಫಿಕ್ ವಾರ್ಡನ್ ಮಾಲಿನಿ ಆರ್.ಪಾಲಾಕ್ಷ, ಅಕ್ಕನ ಬಳಗ ಶಾಲೆಯ ಮುಖ್ಯೋಪಾಧ್ಯಾಯೆ ಸುಗುಣ, ಶಾಲೆಯ ಶಿಕ್ಷಕರು ಇದ್ದರು.