ಮೈಸೂರು : ಜನಸಂಘ ಮತ್ತು ಆರ್‌ಎಸ್‌ಎಸ್ ಹಿನ್ನಲೆಯಿಂದ ಬಂದ ಪತ್ರಕರ್ತ, ಹೋರಾಟಗಾರ ಶಾಂತರಾಜು ಕ್ರಮೇಣ ಅಂಬೇಡ್ಕರ್ ಸಿದ್ಧಾಂತಗಳಿಂದ ಪ್ರಭಾವಿತರಾಗಿ ಆರ್‌ಎಸ್‌ಎಸ್ ನಿಂದ ಸಿಡಿದು ಯುವ ಜನಾಂಗವನ್ನು ಸಂಘಟಿಸಿ ಅವರಲ್ಲಿ ಸಮ ಸಮಾಜದ ಕನಸನ್ನು ಬಿತ್ತಿದರು ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು. ಇತ್ತೀಚೆಗೆ ನಿಧನರಾದ ಪತ್ರಕರ್ತ ಹಾಗೂ ಹಿರಿಯ ದಲಿತ ಚಿಂತಕ ಶಾಂತರಾಜು ನಿಧನಕ್ಕೆ ಕರ್ನಾಟಕ ದಲಿತ ವೆಲ್‌ಫೇರ್ ಟ್ರಸ್ಟ್ ವತಿಯಿಂದ ನಗರದ ಕೃಷ್ಣಮೂರ್ತಿಪುರಂನಲ್ಲಿರುವ ವಿಶ್ವಮೈತ್ರಿ ಬುದ್ಧವಿಹಾರದಲ್ಲಿ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಂತರಾಜು ಸರಳ ಮತ್ತು ಸಜ್ಜನಿಕೆಗೆ ಹೆಸರಾಗಿದ್ದರು. ತಮಗಿಂತ ಕಿರಿಯವರಿಗೂ ಅತ್ಯಂತ ಗೌರವ ನೀಡಿ ಸಂಬೋಧಿಸುತ್ತಿದ್ದರು. ಆರ್‌ಎಸ್‌ಎಸ್ ಹಿನ್ನಲೆ ಇದ್ದರೂ ಕ್ರಮೇಣ ಅಂಬೇಡ್ಕರ್ ಚಿಂತನೆಗಳನ್ನು ಮೈಗೂಡಿಸಿಕೊಂಡು ಹೋರಾಟ ನಡೆಸಿದರು. ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುವುದರ ಜತೆಗೆ ಜನ ಸಾಮಾನ್ಯರ ನೋವುಗಳಿಗೆ ಸ್ಪಂದಿಸಿ ಹೋರಾಟ ರೂಪಿಸುತ್ತಿದ್ದರು. ತಮ್ಮ ಕೊನೆಯ ಅವಧಿವರೆಗೂ ಜನಸೇವೆಗೆ ತಮ್ಮ ಬದುಕು ಮುಡಿಪಾಗಿಟ್ಟಿದ್ದರು ಎಂದರು.
ಲೇಖಕ ಸಿದ್ದುಸ್ವಾಮಿ ಮಾತನಾಡಿ, ದಲಿತ ಯುವಕರ ಸಂಘಟನೆಗೆ ಆದ್ಯತೆ ನೀಡಿದ ಶಾಂತರಾಜು, ಸದಾ ಕಾಲ ಹೋರಾಟದ ಮುಂಚೂಣಿಯಲ್ಲಿದ್ದು, ಯುವಕರಿಗೆ ತಮ್ಮ ಹಕ್ಕುಗಳನ್ನು ದೊರಕಿಸಿಕೊಳ್ಳಲಿ ಪ್ರೇರೇಪಣೆ ನೀಡುತ್ತಿದ್ದರು. ಜತೆಗೆ ಮಹಿಷ ದಸರಾ ಆಚರಣೆಗೆ ಅವರು ನಾಂದಿ ಹಾಡಿದರು ಎಂದರು.
ಪ್ರೊ.ಮಹೇಶ್ ಚಂದ್ರಗುರು, ಲೇಖಕ ನಾ.ದಿವಾಕರ, ಪ್ರೊ.ಪಿ.ವಿ.ನಂಜರಾಜಅರಸು, ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಸ್.ಟಿ.ರವಿಕುಮಾರ್, ಲೇಖಕ ಬನ್ನೂರು ರಾಜು, ಮಾಯೀಗೌಡ ಮುಂತಾದವರು ಶಾಂತರಾಜು ಕುರಿತು ಮಾತನಾಡಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ಶಾಂತರಾಜು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಮೌನಾಚರಣೆ ಸಲ್ಲಿಸಲಾಯಿತು. ರೈತ ಮುಖಂಡ ಹೊಸಕೋಟೆ ಬಸವರಾಜು, ಶಬ್ಬೀರ್ ಮುಸ್ತಫಾ, ಟಿ.ಎಂ.ಮಹೇಶ್, ಚಿಕ್ಕಂದಾನಿ ಸೇರಿದಂತೆ ಶಾಂತರಾಜು ಅವರ ನಿಕಟವರ್ತಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.