ನವದೆಹಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಮುನ್ಸೂಚನೆ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕ್ರಮವನ್ನು ಟೀಕಿಸಿರುವ ಡಿಎಂಕೆ ಪಕ್ಷ ಮೊದಲು ಹಿಂದೂಗಳಿಗೆ ಏಕ ರೂಪ ನಾಗರಿಕ ಸಂಹಿತೆ ಜಾರಿಗೆ ತನ್ನಿ ಎಂದು ಸಲಹೆ ನೀಡಿದೆ.
ಹಿಂದೂ ಧರ್ಮದಲ್ಲಿ ಮೊದಲು ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು. ದೇಶದ ಯಾವುದೇ ದೇವಸ್ಥಾನದಲ್ಲಿ ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಪ್ರತಿಯೊಬ್ಬರಿಗೂ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು. ಸಂವಿಧಾನ ನೀಡಿರುವ ಕಾರಣ ಮಾತ್ರ ನಮಗೆ ಏಕರೂಪ ನಾಗರಿಕ ಸಂಹಿತೆಬೇಡ. ಪ್ರತಿಯೊಂದು ಧರ್ಮಕ್ಕೂ ರಕ್ಷಣೆ ಇರಬೇಕು ಎಂದು ಡಿಎಂಕೆಯ ಟಿಕೆಎಸ್ ಇಳಂಗೋವನ್ ಹೇಳಿದ್ದಾರೆ.
ದೇಶದಲ್ಲಿನ ಬಡತನ, ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಮೋದಿ ಮೊದಲು ಉತ್ತರಿಸಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಕಿಡಿ ಕಾರಿದ್ದಾರೆ.
ಅವರು ಮಣಿಪುರ ವಿಷಯದ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ಇಡೀ ರಾಜ್ಯವು ಉರಿಯುತ್ತಿದೆ. ಅವರು ಈ ಎಲ್ಲಾ ಸಮಸ್ಯೆಗಳಿಂದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅವರು ಹೇಳಿದರು.