ಗುಂಡ್ಲುಪೇಟೆ: ಪಟ್ಟಣದ ಕೆಎಸ್‌ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ನಂಜನಗೂಡು ತಾಲೂಕು ಕೊತ್ತನಹಳ್ಳಿ ಗಿರಿಜನ ಕಾಲೋನಿಯ ಮೀನಾಕ್ಷಿ(೪೫) ಮೃತರು. ಮಹಿಳೆ ಶವ ಬಿದ್ದಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಮೃತರ ಬಳಿ ಇದ್ದ ಆಧಾರ್ ಕಾರ್ಡ್‌ನಿಂದ ವಿಳಾಸ ತಿಳಿದಿದ್ದು, ಸಾವಿಗೆ ಕಾರಣ ತಿಳಿಯಲೆಂದು ನಿಲ್ದಾಣದಲ್ಲಿರುವ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಮೃತ ಮಹಿಳೆಯೊಂದಿಗೆ ಪುರುಷರೊಬ್ಬರು ಮತ್ತು ಇಬ್ಬರು ಮಕ್ಕಳು ಬಂದಿದ್ದು, ಈಕೆ ಕುಸಿದು ಬಿದ್ದು ಮೃತಪಟ್ಟ ನಂತರ ಪುರುಷ ವ್ಯಕ್ತಿ ಮಕ್ಕಳೊಂದಿಗೆ ಮೈಸೂರು ಕಡೆಗೆ ತೆರಳುವ ಬಸ್‌ನಲ್ಲಿ ಹತ್ತಿರುವ ದೃಶ್ಯಗಳು ಸೆರೆಯಾಗಿವೆ.
ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಯಿತು. ಮೃತ ಮಹಿಳೆ ಕುಟುಂಬಸ್ಥರು ಅಥವಾ ಸಂಬಂಧಿಕರನ್ನು ಕರೆಸಿ, ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಒಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.