ಜೈಪುರ: ಖಾಸಗಿ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದ ೨೪ ವರ್ಷದ ಮಹಿಳೆ ಮೇಲೆ ನರ್ಸಿಂಗ್ ಸಹಾಯಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ವಾಸಕೋಶದ ಸೋಂಕಿನಿಂದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಶಿವಾಜಿ ಪಾರ್ಕ್ ಸ್ಟೇಷನ್ ಎಸ್‌ಎಚ್‌ಒ ರಾಜಪಾಲ್ ಸಿಂಗ್ ತಿಳಿಸಿದ್ದಾರೆ. ಆರೋಪಿ ಚಿರಾಗ್ ಯಾದವ್ ಎಂಬಾತ ಮುಂಜಾನೆ ೪ ಗಂಟೆ ಸುಮಾರಿಗೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅವರು ಹೇಳಿದ್ದಾರೆ.
ಆರೋಪಿಯು ಮಹಿಳೆಗೆ ಚುಚ್ಚುಮದ್ದು ನೀಡಿದ್ದು, ಆಕೆ ಪ್ರಜ್ಞಾಹೀನಳಾಗಿದ್ದಳು. ಪತಿ ಮೊಬೈಲ್‌ಗೆ ಕರೆ ಮಾಡಿದ ನಂತರ ಮಹಿಳೆಗೆ ಪ್ರಜ್ಞೆ ಬಂದಿದೆ. ಬಳಿಕ ಆಕೆ ಘಟನೆ ಬಗ್ಗೆ ತನ್ನ ಕುಟುಂಬಸ್ಥರಿಗೆ ತಿಳಿಸಿದ್ದಾಳೆ ಎಂದು ಸಿಂಗ್ ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.