ಗುಂಡ್ಲುಪೇಟೆ: ಬೈಕಿನಲ್ಲಿ ಹೆಲ್ಮೆಟ್ ಮತ್ತು ಮಾಸ್ಕ್ ಧರಿಸಿ ಬಂದ ಮುಸುಕುಧಾರಿಗಳು ಮಹಿಳೆಯೊಬ್ಬರ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ವೀರನಪುರ-ಹೆಗ್ಗಡಹಳ್ಳಿ ಸಂಪರ್ಕ ರಸ್ತೆಯಲ್ಲಿ ನಡೆದಿದೆ.
ತಾಲೂಕಿನ ವೀರನಪುರ ಗ್ರಾಮದ ನಾಗಮ್ಮ ಸರ ಕಳೆದುಕೊಂಡ ಮಹಿಳೆ. ನಾಗಮ್ಮ ಮತ್ತು ಶಿವಮಲ್ಲಪ್ಪ ದಂಪತಿ ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿ ಊರಿಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಮುಸುಕುಧಾರಿಗಳು ನಾಗಮ್ಮ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಸರ ಕಿತ್ತ ರಭಸಕ್ಕೆ ನಾಗಮ್ಮ ಬಲಗಿವಿ ಹಾಗೂ ಕತ್ತಿನ ಭಾಗದಲ್ಲಿ ಗಾಯಗಳಾಗಿದೆ. ರಸ್ತೆಯಲ್ಲಿ ಜನರ ಓಡಾಟ ಕಡಿಮೆಯಿರುವ ಕಾರಣ ದಂಪತಿ ಕೂಗಿಕೊಂಡರೂ ಪ್ರಯೋಜನವಾಗಿಲ್ಲ. ನಂತರ ಗ್ರಾಮಕ್ಕೆ ತೆರಳಿ ವಿಷಯ ಮುಟ್ಟಿಸಿದ್ದಾರೆ. ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಬಳಿಕ ಸಬ್ ಇನ್ಸ್ ಪೆಕ್ಟರ್‍ಗಳಾದ ಸಾಹೇಬಗೌಡ, ಎಂ.ಎಸ್.ಶಿವಶಂಕರಪ್ಪ, ಸಿಬ್ಬಂದಿ ಬೊಮ್ಮನಹಳ್ಳಿ ಪ್ರಭುಸ್ವಾಮಿ, ಜಯರಾಮ್, ಲೋಕೇಶ್, ರಂಗಸ್ವಾಮಿ ಒಳಗೊಂಡ ತಂಡವನ್ನು ರಚಿಸಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸರಗಳ್ಳರ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.