ಬಾಲಕಿಯ ಧೈರ್ಯ ಹಾಗೂ ಸಮಯ ಪ್ರಜ್ಞೆಗೆ ನೆಟ್ಟಿಗರಿಂದ ಭಾರೀ ಶ್ಲಾಘನೆ
ಮಂಗಳೂರು(ದಕ್ಷಿಣ ಕನ್ನಡ): ರಸ್ತೆ ದಾಟುತ್ತಿರುವ ವೇಳೆ ಮಹಿಳೆಯೊಬ್ಬರಿಗೆ ಏಕಾಏಕಿ ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಆಟೋ ಮಹಿಳೆಯ ಮೇಲೆ ಮಗುಚಿ ಬಿದ್ದಿದೆ. ಇದನ್ನು ಕಂಡ ಬಾಲಕಿ ತಕ್ಷಣ ತನ್ನ ತಾಯಿಯ ರಕ್ಷಣೆಗೆ ಧಾವಿಸಿ ರಿಕ್ಷಾ ಕೆಳಗಡೆ ಸಿಲುಕಿದ್ದ ತಾಯಿಯನ್ನು ಉಳಿಸಲು ಬಾಲಕಿ ಆಟೋವನ್ನೇ ಎತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೌದು. ಮಂಗಳೂರು ಹೊರವಲಯದ ಕಿನ್ನಿಗೋಳಿಯ ರಾಮನಗರದಲ್ಲಿ ಮಹಿಳೆಯೋರ್ವೆ ರಸ್ತೆ ದಾಟಲು ಮುಂದಾಗಿದ್ದರು. ಈ ವೇಳೆ ವೇಗವಾಗಿ ಬಂದ ಆಟೋ ನಿಯಂತ್ರಣ ತಪ್ಪಿ ಮಹಿಳೆ ಗುದ್ದಿದೆ. ಅಲ್ಲದೇ ಆಕೆಯ ಮೇಲೆ ಉರುಳಿದೆ. ಈ ವೇಳೆ ರಾಜರತ್ನಪುರ ನಿವಾಸಿ ಚೇತನಾ ಎನ್ನುವ ಮಹಿಳೆಗೆ ತೀವ್ರ ಗಾಯವಾಗಿದೆ.
ಪಿಗ್ಮಿ ಕಲೆಕ್ಷನ್ ಮುಗಿಸಿ ಟ್ಯೂಶನ್ ಗೆ ತೆರಳಿದ್ದ ಮಗಳನ್ನು ಕರೆತರಲು ಟ್ಯೂಶನ್ ಸೆಂಟರ್ ಬಳಿ ಬಂದ ಚೇತನಾ ಏಕಾಏಕಿ ರಸ್ತೆ ದಾಟಲು ಮುಂದಾಗಿದ್ದರು. ಇದೇ ವೇಳೆ ಕಟೀಲಿನಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ.
ಮಗಳ ಮುಂದೆಯೇ ತಾಯಿಗೆ ಆಟೋ ಡಿಕ್ಕಿಯಾಗಿದ್ದು, ಘಟನೆ ನಡೆದ ತಕ್ಷಣ ಆಟೋ ಎತ್ತಿ ತಾಯಿಯನ್ನು ಮಗಳು ಮೇಲಕ್ಕೆತ್ತಿದ್ದಾಳೆ. ಘಟನೆಯಲ್ಲಿ ಆಟೋ ಚಾಲಕ, ಪ್ರಯಾಣಿಕ ಸೇರಿ ಸ್ಥಳದಲ್ಲಿದ್ದವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯ ಅಂಗಡಿಯ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಅಮ್ಮನ ಜೀವ ಕಾಪಾಡಿದ ಬಾಲಕಿಯ ಧೈರ್ಯ ಹಾಗೂ ಸಮಯ ಪ್ರಜ್ಞೆಗೆ ನೆಟ್ಟಿಗರಿಂದ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.