ದೇವನಹಳ್ಳಿ: ದೇವಸ್ಥಾನದ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೃತಪಟ್ಟಿದ್ದಾರೆ.
ಹೊಸಕೋಟೆಯ ಕಾವೇರಿನಗರ ನಿವಾಸಿ ಸಿದ್ದಗಂಗಮ್ಮ (60) ಮೃತ ದುರ್ದೈವಿ.
ಹನುಮ ಜಯಂತಿ ಹಿನ್ನೆಲೆಯಲ್ಲಿ ಹೊಸಕೋಟೆಯ ವೆಂಕಟರಮಣಸ್ವಾಮಿ, ಊರುಬಾಗಿಲು ಆಂಜನೇಯ, ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಕ್ತರು ಪುಳಿಯೋಗರೆ, ಪಾಯಸ, ಲಡ್ಡು ಸೇವಿಸಿದ್ದರು.
ದೇವಾಲಯಗಳಲ್ಲಿ ಪ್ರಸಾದ ತಿಂದಿದ್ದ ಭಕ್ತರು ರಾತ್ರಿಯಿಂದ ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದರು. ಅಸ್ವಸ್ಥರನ್ನು ಹೊಸಕೋಟೆ, ಕೋಲಾರ, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ವತ್ರೆಗೆ ದಾಖಲಾದವರಲ್ಲಿ 15ಕ್ಕೂ ಅಧಿಕ ಜನರ ಸ್ಥಿತಿ ಗಂಭೀರವಾಗಿದೆ. ಇವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಸಿದ್ದಗಂಗಮ್ಮ ಅವರಿಗೆ ಪತಿ ಶಿವಣ್ಣ ಲಾಡು ಪ್ರಸಾದ ತಂದುಕೊಟ್ಟಿದ್ದಾರೆ. ಈ ಪ್ರಸಾದವನ್ನು ತಿಂದ ಸಿದ್ದಗಂಗಮ್ಮ ಅವರು ಬೆಳಿಗ್ಗೆ ವಾಂತಿ ಭೇದಿಯಿಂದ ಬಳಲುತ್ತಿದ್ದರು. ಕೂಡಲೆ ಅವರನ್ನು ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಿದ್ದಗಂಗಮ್ಮ ಮೃತಪಟ್ಟಿದ್ದಾರೆ.