Saturday, April 12, 2025
Google search engine

Homeರಾಜ್ಯಸುದ್ದಿಜಾಲಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ವಿಶ್ವರೂಪ: ನಾನಾ ರಾಜ್ಯಗಳ ನೃತ್ಯ ಪ್ರಕಾರ ಪ್ರದರ್ಶನ

ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ವಿಶ್ವರೂಪ: ನಾನಾ ರಾಜ್ಯಗಳ ನೃತ್ಯ ಪ್ರಕಾರ ಪ್ರದರ್ಶನ

ಪೂರ್ಣ ಚೇತನ ಶಾಲಾ ಮಕ್ಕಳಿಂದ “ಭಾರತ ನೃತ್ಯ ದರ್ಶನ”ದ ಮೂಲಕ ಗಾಂಧರ್ವ ಲೋಕ ಸೃಷ್ಟಿ

ಮೈಸೂರು: ಜಾರ್ಖಂಡ್‌ನ ಪೈಕಾ ನೃತ್ಯ ಪ್ರಕಾರ, ಲಡಾಕ್‌ನ ಕಥೋಕ್ ಚೆನ್ಮೋ ನೃತ್ಯ ರೂಪ, ಮಧ್ಯಪ್ರದೇಶದ ಮಟ್ಕಿ ನೃತ್ಯ ಪ್ರಕಾರ… ಕರಾವಳಿ ಕರ್ನಾಟಕದ ಜನಪ್ರಿಯ ಹುಲಿ ನೃತ್ಯ (ಪಿಲಿ ನಲಿಕೆ).. ಹೀಗೆ ನಮ್ಮ ದೇಶದ ನಾನಾ ಭಾಗಗಳಲ್ಲಿ ಪ್ರಸಿದ್ಧಿಯಾಗಿರುವ ನೃತ್ಯ ಪ್ರಕಾರಗಳು ನಮ್ಮಲ್ಲಿನ ಬಹುತೇಕರಿಗೆ ಇನ್ನು ಅಪರಿಚಿತ. ನಮ್ಮ ದೇಶದ ನಾನಾ ರಾಜ್ಯಗಳ ಈ ಎಲ್ಲಾ ಸ್ಥಳೀಯ ಜನಪ್ರಿಯ ನೃತ್ಯ ಪ್ರಕಾರಗಳು ನಮ್ಮ ಸಂಸ್ಕೃತಿಯನ್ನು ವಿಶ್ವದಲ್ಲೇ ಅತ್ಯಂತ ವಿಶಿಷ್ಟವಾಗಿಸಿವೆ.

ನಮ್ಮಲ್ಲಿನ ವಿವಿಧತೆಯಲ್ಲಿ ಏಕತೆಯ ಕಲ್ಪನೆಗೆ ಅವು ಕಾರಣವಾಗಿವೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ, ಈ ಎಲ್ಲಾ ನೃತ್ಯ ಪ್ರಕಾರಗಳ ವಿಶ್ವರೂಪ ದರ್ಶನ ಆಗಸ್ಟ್ 4 ರ ಭಾನುವಾರದಂದು ನಗರದಲ್ಲಿ ನಡೆಯಲಿದೆ. ನಗರದ ಪೂರ್ಣ ಚೇತನ ಶಾಲೆಯ ವಿದ್ಯಾರ್ಥಿಗಳು ದೇಶದ ಎಲ್ಲಾ ರಾಜ್ಯಗಳ ಸ್ಥಳೀಯ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಿದ್ದಾರೆ. ನಮ್ಮ ರಾಜ್ಯಗಳಲ್ಲಿ ಪ್ರಸಿದ್ಧವಾಗಿರುವ ಜನಪ್ರಿಯ ನೃತ್ಯ ಪ್ರಕಾರಗಳನ್ನು ಅವರು ನಗರದ ನೃತ್ಯಪ್ರಿಯರ ಎದುರು ಪ್ರಸ್ತುತಪಡಿಸಲಿದ್ದಾರೆ. ಆ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಶ್ರೀಕಾರ ಹಾಡಲಿದ್ದಾರೆ. ತಮ್ಮ ಎರಡು ಗಂಟೆಗಳ ಪ್ರದರ್ಶನದಲ್ಲಿ ಈ ವಿದ್ಯಾರ್ಥಿಗಳು ವಿವಿಧತೆಯಲ್ಲಿ ಏಕತೆಯ ಕಲ್ಪನೆಯನ್ನು ಪ್ರಸ್ತುತಪಡಿಸಲಿದ್ದಾರೆ.

ಪೂರ್ಣ ಚೇತನ ಶಾಲೆಯ ಪೂರ್ವ ಪ್ರಾಥಮಿಕದಿಂದಿಡಿದು ಹತ್ತನೇ ತರಗತಿಯವರೆಗಿನ 525 ವಿದ್ಯಾರ್ಥಿಗಳು ಅಂದು ಸಂಜೆ ನಿಮ್ಮನ್ನು ಭಾರತೀಯ ನೃತ್ಯ ಪ್ರಕಾರಗಳ ಗಾಂಧರ್ವ ಲೋಕಕ್ಕೆ ಕರೆದೊಯ್ಯಲಿದ್ದಾರೆ. ಅಂದು ಸಂಜೆ 4 ಗಂಟೆಗೆ ನಗರದ ಕೆಎಸ್‌ಒಯು ಘಟಿಕೋತ್ಸವ ಸಭಾಂಗಣದಲ್ಲಿ ಈ ಭಾರತೀಯ ನೃತ್ಯ ಪ್ರಕಾರಗಳ ಗಾಂಧರ್ವ ಲೋಕ ಸೃಷ್ಟಿಯಾಗಲಿದೆ.

ವಿದ್ಯಾರ್ಥಿಗಳು ಮಾರುಣಿ (ಸಿಕ್ಕಿಂ), ಚಿರಾವ್ (ಮಿಜೋರಾಂ), ರೌಫ್ (ಕಾಶ್ಮೀರ್), ಬೌಲ್ (ಪಶ್ಚಿಮ ಬಂಗಾಳ), ಮಣಿಪುರಿ (ಮಣಿಪುರ), ಜುಮರ್ (ಹರಿಯಾಣ), ಘೂಮರ್ (ರಾಜಸ್ಥಾನ), ಗಾರ್ಬಾ (ಗುಜರಾತ್), ರಾಸ್ಲೀಲಾ (ಉತ್ತರ ಪ್ರದೇಶ), ಕೋಲಾಟ (ಕರ್ನಾಟಕ), ಲಾವಣಿ (ಮಹಾರಾಷ್ಟ್ರ), ಗೋವಾ (ಗೋವಾ), ಬಿಹು (ಅಸ್ಸಾಂ), ವಂಗಲಾ (ಮೇಘಾಲಯ), ದಾಂಡಿಯಾ (ಗುಜರಾತ್), ಭಾಂಗ್ರಾ (ಪಂಜಾಬ್), ಲೆಜಿಮ್ (ಮಹಾರಾಷ್ಟ್ರ), ಚಾಹು (ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾ), ಪಿಲಿ ನಲಿಕೆ (ಹುಲಿ ಕುಣಿತ- ಕರ್ನಾಟಕ ಜಾನಪದ), ಯಕ್ಷಗಾನ (ಕರ್ನಾಟಕ), ನಾತಿ (ಹಿಮಾಚಲ ಪ್ರದೇಶ), ಚಾಂಗ್ ಲೂ (ನಾಗಾಲ್ಯಾಂಡ್), ಭರತನಾಟ್ಯ (ತಮಿಳುನಾಡು), ಪೆರಿಣಿ (ತೆಲಂಗಾಣ), ಒಡಿಸ್ಸಿ (ಒಡಿಶಾ), ಮೋಹಿನಿಯಾಟ್ಟಂ (ಕೇರಳ), ಡೊಳ್ಳು ಕುಣಿತ (ಕರ್ನಾಟಕ), ವೀರಗಾಸೆ (ಕರ್ನಾಟಕ), ಹೊಜಗಿರಿ (ತ್ರಿಪುರ) ಮತ್ತು ಹಿಮಾಚಲ ಪ್ರದೇಶದ ಅಜಿಲಮು ನೃತ್ಯ ಪ್ರಕಾರಗಳನ್ನು ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸುತ್ತಾರೆ.

ಕಳೆದ ಒಂದು ತಿಂಗಳಿನಿಂದ, ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮೈಸೂರಿನ ಜನರಿಗೆ ಪ್ರದರ್ಶಿಸಲು ಶಾಲಾ ಮಕ್ಕಳು ಕಠಿಣ ಅಭ್ಯಾಸವನ್ನು ನಡೆಸುತ್ತಿದ್ದಾರೆ. ದೇಶಭಕ್ತಿಯ ಮೇಲೆ ಕೇಂದ್ರೀಕೃತವಾಗಿರುವ ವಿಶ್ವ ದಾಖಲೆಯನ್ನು ನಿರ್ಮಿಸುವ ಪ್ರಯತ್ನದ ಭಾಗವಾಗಿ ಈ ಪ್ರಯತ್ನ ನಡೆಯಲಿದೆ.

ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ದರ್ಶನ್ ರಾಜ್ ಪ್ರಕಾರ ವೈವಿಧ್ಯತೆಯಲ್ಲಿ ಒಗ್ಗಟ್ಟಿನ ಪರಿಕಲ್ಪನೆಯನ್ನು ನಮ್ಮಲ್ಲಿ ಇನ್ನಷ್ಟು ದೃಢಗೊಳಿಸುವುದೇ ಈ ಪ್ರಯತ್ನದ ಪ್ರಮುಖ ಉದ್ದೇಶ. “ನಮ್ಮ ರಾಷ್ಟ್ರದ ಪ್ರತಿಯೊಂದು ರಾಜ್ಯವು ತನ್ನದೇ ಆದ ವಿಭಿನ್ನ ನೃತ್ಯ ಪ್ರಕಾರಗಳನ್ನು ಹೊಂದಿದೆ. ನಮ್ಮ ಸಮಾಜಕ್ಕೆ ವಿವಿಧತೆಯಲ್ಲಿ ಏಕತೆಯ ಸಂದೇಶವನ್ನು ನೀಡಲು ನಾವು ಈ ಎಲ್ಲಾ ನೃತ್ಯ ಪ್ರಕಾರಗಳನ್ನು ಏಕಕಾಲದಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ,” ಎಂದು ಅವರು ಹೇಳಿದರು.

ಖ್ಯಾತ ಕಲಾವಿದೆಯೂ ಆಗಿರುವ ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಮಾತನಾಡಿ, ಇಂತಹ ಪ್ರಯೋಗ ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ನಡೆಯಲಿದೆ. “ಇದು ಕೇವಲ ನೃತ್ಯ ಪ್ರದರ್ಶನವಲ್ಲ; ಬದಲಿಗೆ ಭಾರತೀಯತೆಯ ಸಂಭ್ರಮವನ್ನು ಆಚರಿಸುವುದು,”ಎಂದು ಅವರು ಹೇಳಿದರು.

ಶಾಲೆಯ ಹಳೆ ವಿದ್ಯಾರ್ಥಿ, ನಟ, ನಿರ್ದೇಶಕ ಸುಪ್ರೀತ್ ಆರ್ ಭಾರದ್ವಾಜ್ ಹಾಗು ಅವರ ತಂಡ, ಶಾಲೆಯ ಶಿಕ್ಷಕರು ಈ ಎಲ್ಲಾ ನೃತ್ಯ ಪ್ರಕಾರಗಳ ಸಂಯೋಜನೆಯನ್ನು ಮಾಡುತ್ತಿದ್ದಾರೆ.

RELATED ARTICLES
- Advertisment -
Google search engine

Most Popular