ಹನಗೋಡು: ವಿವಾಹವಾಗಲು ತನ್ನ ಮಗಳನ್ನು ಕೊಡಲಿಲ್ಲವೆಂದು ಕೋಪಗೊಂಡ ಯುವಕನೊರ್ವ ಹುಡುಗಿ ಮನೆಗೆ ಸೇರಿದ ಎರಡು ಎಕರೆ ಅಡಿಕೆ ಗಿಡ ಹಾಗೂ ಅರ್ಧ ಎಕರೆ ಶುಂಠಿ ಬೆಳೆಯನ್ನೇ ಕೊಚ್ಚಿ ಹಾಕಿ ನಾಶಪಡಿಸಿ ಸೇಡು ತೀರಿಸಿಕೊಂಡಿರುವ ಘಟನೆ ನಡೆದಿದೆ.
ಹುಣಸೂರು ತಾಲೂಕು ಹನಗೋಡು ಹೋಬಳಿಯ ಕಡೇಮನುಗನಹಳ್ಳಿ ಗ್ರಾಮದ ಅಶೋಕ್ ಎಂಬಾತನೇ ಈ ಕೃತ್ಯ ಎಸಗಿದ್ದು, ಗ್ರಾಮದ ವೆಂಕಟೇಶ್‌ರಿಗೆ ಸೇರಿದ ಅಡಿಕೆ ತೋಟ ಹಾಗೂ ಶುಂಠಿ ಬೆಳೆ ನಾಶವಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ವೆಂಕಟೇಶ ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ತಮ್ಮ ಪುತ್ರಿಯನ್ನು ಅಶೋಕನಿಗೆ ಮದುವೆ ಮಾಡಿಕೊಡಲು ಮಾತುಕತೆಯಾಗಿತ್ತು. ಈ ನಡುವೆ ಆತನ ನಡವಳಿಕೆಯಿಂದ ಆತಂಕಗೊಂಡ ಯುವತಿ ಅಶೋಕನ್ನು ಮದುವೆಯಾಗಲು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಅಶೋಕ್ ಮೂರು ದಿನಗಳ ಹಿಂದೆ ವೆಂಕಟೇಶರ ಜಮೀನಿನಲ್ಲಿ ಬೆಳೆದಿದ್ದ ಅರ್ಧ ಎಕರೆ ಶುಂಠಿ ಬೆಳೆಯನ್ನು ನಾಶಪಡಿಸಿದ್ದ, ಈ ಸಂಬಂದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಪುನಃ ಐದು ವರ್ಷವಾಗಿರುವ ೭೫೦ ರಿಂದ ೮೦೦ ಅಡಿಕೆ ಮರಗಳನ್ನು ತುಂಡರಿಸಿ ಬೆಳೆಯನ್ನು ನಾಶಪಡಿಸಿದ್ದಾನೆ. ಅಲ್ಲದೆ ಆರು ತಿಂಗಳ ಹಿಂದೆ ಮನೆ ಬಳಿ ನಿಲ್ಲಿಸಿದ್ದ ಬೈಕನ್ನು ಬೆಂಕಿ ಹಾಕಿ ಸುಟ್ಟು ಹಾಕಲಾಗಿದೆ ಎಂದು ತಿಳಿಸಿದ್ದಾರ
ಈ ಪ್ರಕರಣಗಳಿಂದ ತಮ್ಮ ಕುಟುಂಬ ಆತಂಕದ ನಡುವೆ ಜೀವನ ಸಾಗಿಸುವಂತಾಗಿದ್ದು, ಆರೋಪಿ ವಿರುದ್ದ ಸೂಕ್ತ ಕ್ರಮವಾಗಬೇಕೆಂದು ರೈತ ವೆಂಕಟೇಶ್ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮವಹಿಸಿದ್ದಾರೆ.
