Friday, April 18, 2025
Google search engine

Homeಅಪರಾಧಕೋರಮಂಗಲದ ಮಹಿಳಾ ಪಿಜಿಯೊಳಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆ

ಕೋರಮಂಗಲದ ಮಹಿಳಾ ಪಿಜಿಯೊಳಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆ

ಬೆಂಗಳೂರು: ಮಹಿಳಾ ಪಿಜಿಯೊಳಗೆ ನುಗ್ಗಿದ ದುಷ್ಕರ್ಮಿ ಯುವತಿಯ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಬಿಹಾರ ಮೂಲದ ಕೃತಿಕುಮಾರಿ(24) ಕೊಲೆಯಾದ ಯುವತಿ. ಈಕೆ ಎಂಬಿಎ ಪದವೀಧರೆಯಾಗಿದ್ದು, ನಗರದ ಖಾಸಗಿ ಕಂಪನಿಯೊಂದರ ಉದ್ಯೋಗಿ. ಕೋರ ಮಂಗಲದ ವಿಆರ್ ಲೇಔಟ್ನಲ್ಲಿರುವ ಪಿಜಿಯಲ್ಲಿ ನೆಲೆಸಿದ್ದರು.

ನಿನ್ನೆ ಎಂದಿನಂತೆ ಕೆಲಸಕ್ಕೆ ಹೋಗಿದ್ದು, ರಾತ್ರಿ ಪಿಜಿಗೆ ಕೃತಿ ಮರಳಿದ್ದರು. ಇದೇ ಸಮಯಕ್ಕಾಗಿ ಕಾಯುತ್ತಾ ಕುಳಿತಿದ್ದ ದುಷ್ಕರ್ಮಿ ರಾತ್ರಿ 11.10 ರಿಂದ 11.30 ರ ಮಧ್ಯೆ ಮಾಲೀಕರ ಹಾಗೂ ಮಹಿಳಾ ಸೆಕ್ಯೂರಿಟಿ ಗಾರ್ಡ್ ಕಣ್ತಪ್ಪಿಸಿ, ಪಿಜಿಯೊಳಗೆ ನುಗ್ಗಿ 3ನೇ ಮಹಡಿಯ ರೂಂ ಬಳಿ ಹೋಗಿ ಚಾಕುವಿನಿಂದ ಕೃತಿಕುಮಾರಿ ಕತ್ತು ಕೊಯ್ದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಸುದ್ದಿ ತಿಳಿದು ಕೋರಮಂಗಲ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಆರೋಪಿ ಪತ್ತೆಗೆ ಬಲೆಬೀಸಿದ್ದಾರೆ. ಸ್ಥಳಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪಿಜಿ ಮಾಲೀಕರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಪರಿಚಯಸ್ಥ ಯುವಕನಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಪಿಜಿ ಹಾಗೂ ಸುತ್ತಮುತ್ತಲ ರಸ್ತೆಯಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಆರೋಪಿಯ ಪತ್ತೆ ಕಾರ್ಯ ಕೈಗೊಂಡಿದ್ದಾರೆ.

ಪಿಜಿ ಯುವತಿಯರ ಆತಂಕ :
ಮಹಿಳಾ ಪಿಜಿಯಲ್ಲಿ ನಡೆದಿರುವ ಘಟನೆಯಿಂದ ಉಳಿದ ಯುವತಿಯರು ಭಯಭೀತರಾಗಿದ್ದಾರೆ. ಆರೋಪಿ ಪಿಜಿಯೊಳಗೆ ಹೇಗೆ ಬಂದ, ಕೃತಿ ಉಳಿದುಕೊಂಡಿದ್ದ ರೂಮಿನ ವಿವರ ಹೇಗೆ ಗೊತ್ತಾಯಿತು, ಆತ ಎಲ್ಲಾ ತಿಳಿದುಕೊಂಡೇ ಬಂದಿರುವ ಅನುಮಾನ ವ್ಯಕ್ತವಾಗಿದೆ.

ಯುವತಿಯ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ ಬಗ್ಗೆ ಸುಳಿವು ಸಿಕ್ಕಿದೆ. ಆದಷ್ಟು ಬೇಗ ಬಂಧಿಸಲಾಗುವುದು ಎಂದು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular