ದಾವಣಗೆರೆ: ಕೃಷಿ ಪಂಪ್ ಸೆಟ್ ಗಳಿಗೆ ಆಧಾರ ಲಿಂಕ್ ಖಂಡಿಸಿ ಸೆ. 4ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ. ಎಲ್ಲಾ ಜಿಲ್ಲೆಗಳಲ್ಲಿ ವಿದ್ಯುತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಭೂ ಸಂಬಂಧಿ ಕಾಯ್ದೆ ಜಾರಿ ಮಾಡಿತ್ತು. ಆಗ 11 ತಿಂಗಳ ಸತತ ಹೋರಾಟ ನಡೆದ ಪರಿಣಾಮ ಕೇಂದ್ರ ಕೈ ಬಿಟ್ಟಿತು. ಆದರೆ, ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಕಾಯ್ದೆ ಜಾರಿ ಮಾಡಿತು. ಆಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಮುಂದಿನ ಚುನಾವಣೆ ವೇಳೆ ನಮ್ಮನ್ನು ಬೆಂಬಲಿಸಿ, ನಾವು ಕಾನೂನು ಹಿಂತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಈಗ 13 ತಿಂಗಳ ಕಳೆದರೂ ಇದುವರೆಗೆ ಅವರ ಭರವಸೆ ಈಡೇರಿಸಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ಕಾನೂನು ರದ್ದುಮಾಡಿ ಪರಿಷತ್ ನಲ್ಲಿ ಬಹುಮತ ಸಿಕ್ಕ ಬಳಿಕ ಸಂಪೂರ್ಣ ಹಿಂಪಡೆಯುವ ಕೆಲಸ ಮಾಡುವ ಕೆಲಸ ಮಾಡಬೇಕಿತ್ತು. ಆದರೆ, ಸಿದ್ದರಾಮಯ್ಯ ಸೋಗಲಾಡಿತನ ತೋರಿಸುತ್ತಿದ್ದಾರೆ ಎಂದು ಟೀಕಿಸಿದರು.
ಇಂದು ಎಲ್ಲ ರಾಜಕೀಯ ಪಕ್ಷಗಳು ಬಹುರಾಷ್ಟ್ರೀಯ ಕಂಪನಿಯ ಗುಲಾಮರಾಗಿದ್ದಾರೆ. ರೈತರ ಸಮ್ಮತಿ ಇಲ್ಲದೆ ಪಂಪ್ ಸೆಟ್ ಗೆ ಮೀಟರ್ ಅಳವಡಿಸಿದರೆ ಅದನ್ನು ಕಿತ್ತು ಬೀದಿ ಬೀದಿಗಳಲ್ಲಿ ಎಸೆಯುತ್ತೇವೆ ಎಂದರು.
ಮೊದಲು ಸ್ವಾಮಿನಾಥನ್ ವರದಿಯಂತೆ ರೈತರ ಬೆಳೆಗಳಿಗೆ ಬೆಲೆ ಕೊಡುವ ವ್ಯವಸ್ಥೆ ಮಾಡಿದ ಬಳಿಕ ಸರ್ಕಾರ ಮೀಟರ್ ಹಾಕಿ ಬಿಲ್ ಕೊಡಲಿ. ಅಲ್ಲಿಯವರೆಗೆ ಮೀಟರ್ ಅಳವಡಿಸುವ ಆಲೋಚನೆ ಕೈ ಬಿಡಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.