ಬೆಂಗಳೂರು: ರಾಜ್ಯದ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್ ಕಡ್ಡಾಯ ನಿಮ್ಮ ಯಾವುದಾದರೊಂದು ದಾಖಲೆ ಇರಲೇಬೇಕು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾನು ಫೀಲ್ಡಿಗೆ ಹೋದಾಗ ಎಲ್ಲರೂ ಕೇಳಿದ್ದಾರೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಸಚಿವರು, ಶಾಸಕರು ಕೂಡ ಸಲಹೆ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಇದಕ್ಕೆ ಸೂಚನೆ ನೀಡಿದ್ದಾರೆ. ಅದರಂತೆಯೇ ಎಲ್ಲಾ ಕಡೆಯಲ್ಲಿಯೂ ಈ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇವೆ ಎಂದಿದ್ದಾರೆ.
ವಂಚನೆ ಪ್ರಕರಣಗಳನ್ನು ತಪ್ಪಿಸಲು ಆಧಾರ್ ಅಥವಾ ಈ ಮೂರನ್ನು ಒಳಗೊಂಡ ಯಾವುದಾದರೊಂದು ದಾಖಲೆಯನ್ನು ಕೊಡಬೇಕು. ಇದು ಒಂದು ವ್ಯವಸ್ಥೆ ಮೇಲೆ ನಂಬಿಕೆ ಇಡುವಂತೆ ಮಾಡುತ್ತದೆ. ಸಕಾರಾತ್ಮಕವಾಗಿ ಸಾರ್ವಜನಿಕರು ಸಹಕಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಆಧಾರ್ ಜೋಡಣೆ ಮಾಡುವುದರಿಂದ ನಡೆಯುವ ವಂಚನೆಗಳನ್ನು ಕಡಿಮೆಗೊಳಿಸಬಹುದು. ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಜನರಿಗೆ ಸುಲಲಿತವಾಗಿ ಕೆಲಸವಾಗುವ ರೀತಿಯಲ್ಲಿ ಹೆಜ್ಜೆ ಇಡುತ್ತಿದ್ದೇವೆ. ಜೊತೆಗೆ ನೊಂದಣಿ ವ್ಯವಸ್ಥೆಯಲ್ಲಿ ಮತ್ತಷ್ಟು ಬದಲಾವಣೆ ತರುತ್ತಿದ್ದೇವೆ.
ನಕಲಿ ವೈಯಕ್ತಿಕ ದಾಖಲೆಯನ್ನು ಸೃಷ್ಟಿಸಿ, ರಿಜಿಸ್ಟರ್ ಮಾಡಿಕೊಂಡು ವಂಚನೆ ಮಾಡುತ್ತಿದ್ದಾರೆ. ಈ ರೀತಿ ವ್ಯವಸ್ಥಿತವಾಗಿ ಜಮೀನುಗಳನ್ನು ದರೋಡೆ ಮಾಡುವ ಕೆಲಸ ನಡೆಯುತ್ತಿದೆ. ಈ ತರಹದ ವಂಚನೆಗಳನ್ನು ತಡೆಗಟ್ಟಲು ವ್ಯಾಪಕ ದೂರುಗಳು ಈಗಾಗಲೇ ಬಂದಿವೆ. ರಾಜ್ಯದ ಎಲ್ಲಾ ಸಬ್ ರಿಜಿಸ್ಟರ್ ಕಚೇರಿಗಳಲ್ಲೂ ಕಾವೇರಿ-2 ಜಾರಿಗೊಳಿಸಲಾಗಿದೆ. ಅಪಾಂಯ್ಟ್‌ಮೆಂಟ್ ಸಿಸ್ಟಮ್ ಸರಿಯಾಗಿ ಪಾಲಿಸದೇ ಇರುವುದರಿಂದ ಇಷ್ಟು ದಿನ ಜನ ಜಂಗುಳಿ ಇರುತ್ತಿತ್ತು. ಈಗ ಅಪಾಂಯ್ಟ್‌ಮೆಂಟ್ ಸಿಸ್ಟಮ್ ಕಡ್ಡಾಯ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.