ಹೊಸದಿಲ್ಲಿ: ಹಿಂದಿನ ಆಮ್ ಆದ್ಮಿ ಪಕ್ಷದ ಸರ್ಕಾರ ಖಜಾನೆಯನ್ನು ಬರಿದು ಮಾಡಿದೆ ಆದರೆ ಅರ್ಹ ಮಹಿಳೆಯರಿಗೆ ಮಾಸಿಕ 2500 ರೂಪಾಯಿಗಳ ಗೌರವಧನ ನೀಡಲು ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷ ರೂಪುಗೊಂಡ ಬಳಿಕ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಈ ವಿಚಾರದ ಬಗ್ಗೆ ಕಳೆದ ನಾಲ್ಕು ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳ ಜತೆ ಹಲವು ಸುತ್ತಿನ ಮಾತುಕತೆಗಳು ನಡೆದಿವೆ ಎಂದು ಸ್ಪಷ್ಟಪಡಿಸಿದರು.
“ಸರ್ಕಾರಿ ಅಧಿಕಾರಿಗಳ ಜತೆ ಹಣಕಾಸು ಸ್ಥಿತಿಗತಿ ಬಗ್ಗೆ ಪರಾಮರ್ಶೆ ನಡೆಸಲು ಚರ್ಚಿಸಿದಾಗ ಹಿಂದಿನ ಸರ್ಕಾರ ನಮಗೆ ಬರಿದಾದ ಖಜಾನೆ ಬಿಟ್ಟು ಹೋಗಿರುವುದು ಗಮನಕ್ಕೆ ಬಂದಿದೆ” ಎಂದು ಮಹಿಳಾ ನೆರವು ಯೋಜನೆ ಜಾರಿ ಬಗ್ಗೆ ನಡೆದ ಸಿದ್ಧತೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು. “ಆದರೆ ಮಹಿಳೆಯರಿಗೆ ಹಣ ನೀಡುವುದು ನಾವು ಮಾಡಲೇಬೇಕಾದ ಕೆಲಸ. ವಿಸ್ತೃತವಾದ ಯೋಜನೆಯೊಂದಿಗೆ ಅದನ್ನು ಖಂಡಿತವಾಗಿಯೂ ನಾವು ಜಾರಿ ಮಾಡುತ್ತೇವೆ. ಇದು ನಮ್ಮ ಬದ್ಧತೆ. 1000% ನಾನದನ್ನು ಮಾಡುತ್ತೇನೆ” ಎಂದು ಭರವಸೆ ನೀಡಿದರು.
ಒಂದು ಅಂದಾಜಿನ ಪ್ರಕಾರ, ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಮತ್ತು ಇತರ ರಾಜ್ಯ ಕಲ್ಯಾಣ ಯೋಜನೆಯ ಫಲಾನುಭವಿಗಳನ್ನು ಹೊರತುಪಡಿಸಿ 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ 38 ಲಕ್ಷ ಮಹಿಳೆಯರು ಈ ಯೋಜನೆಯ ಸೌಲಭ್ಯ ಪಡೆಯಲಿದ್ದಾರೆ. ಇದಕ್ಕೆ ಸರ್ಕಾರಕ್ಕೆ ವಾರ್ಷಿಕ 11 ಸಾವಿರ ಕೋಟಿ ರೂಪಾಯಿ ಅಗತ್ಯವಿದೆ.