ದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಖಂಡಿಸಿ ಎಎಪಿ ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಬಂಧನದಲ್ಲಿರುವ ಕೇಜ್ರಿವಾಲ್ ನೀಡಿರುವ ಸಂದೇಶವನ್ನ ಅವರ ಪತ್ನಿ ಓದುತ್ತಿರುವ ವಿಡಿಯೋವನ್ನು ಎಎಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಈ ಬೆನ್ನಲ್ಲೇ ದೆಹಲಿಯಲ್ಲಿರುವ ಎಎಪಿ ಕಚೇರಿಯನ್ನು ಪೊಲೀಸರು ಎಲ್ಲ ಕಡೆಗಳಿಂದ ಸೀಲ್ ಮಾಡಿದ್ದಾರೆ ಎಂದು ಪಕ್ಷದ ನಾಯಕರು ಆರೋಪಿಸಿದ್ದಾರೆ.
ತಮ್ಮನ್ನು ಪಕ್ಷದ ಕಚೇರಿಗೆ ಪ್ರವೇಶಿದಂತೆ ತಡೆಯಲಾಗುತ್ತಿದೆ ಎಂದು ಎಎಪಿ ಮುಖಂಡರಾದ ಅತಿಶಿ, ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ಇತರರು ಆರೋಪಿಸಿದ್ದಾರೆ. ದೆಹಲಿಯಲ್ಲಿರುವ ಎಎಪಿ ಕಚೇರಿಯನ್ನು ಎಲ್ಲ ಕಡೆಯಿಂದಲೂ ಸೀಲ್ ಮಾಡಲಾಗಿದ್ದು, ಪ್ರವೇಶ ನಿರ್ಬಂಧಿಸಲಾಗಿದೆ. ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು ಎಂದು ದೆಹಲಿ ಸಚಿವೆ ಆತಿಶಿ ಹೇಳಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆತಿಶಿ, ದಿಲ್ಲಿಯ ಐಟಿಒನಲ್ಲಿರುವ ಪಕ್ಷದ ಕಚೇರಿಯನ್ನು ಎಲ್ಲ ಕಡೆಗಳಿಂದ ಸೀಲ್ ಮಾಡಲಾಗಿದೆ. ಚುನಾವಣೆ ಹತ್ತಿರದಲ್ಲಿರುವಾಗ ರಾಷ್ಟ್ರೀಯ ಪಕ್ಷವೊಂದರ ಕಚೇರಿಯನ್ನು ಈ ರೀತಿ ಹೇಗೆ ಬಂದ್ ಮಾಡಬಹುದು ಎಂದು ಪ್ರಶ್ನಿಸಿದ್ದಾರೆ.
ಎಎಪಿ ನಾಯಕರ ಆರೋಪವನ್ನು ದೆಹಲಿ ಪೊಲೀಸರು ಅಲ್ಲಗಳೆದಿದ್ದಾರೆ. ನಾವು ಯಾವುದೇ ಕಚೇರಿಯನ್ನು ಸೀಲ್ ಮಾಡಿಲ್ಲ. ಆ ಪ್ರದೇಶದಲ್ಲಿ ಸಿಆರ್‌ಪಿಸಿ ಸೆಕ್ಷನ್ ೧೪೪ ಡಿಡಿ ಜಾರಿಗೊಳಿಸಲಾಗಿದೆ. ಹೀಗಾಗಿ, ಅಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಜತೆಗೆ, ಆ ಸ್ಥಳಗಳಲ್ಲಿ ಸಭೆ ಸೇರುವುದನ್ನು ನಿಷೇಧಿಸಲಾಗಿದೆ ಎಂದು ಡಿಸಿಪಿ (ಕೇಂದ್ರ) ಎಂ ಹರ್ಷವರ್ಧನ ಹೇಳಿದ್ದಾರೆ.