ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ಜೆರೋಸಾ ಶಾಲಾ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಪ್ರಚೋದಿಸಿದ ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ವಿರುದ್ಧ AAP ಆಕ್ರೋಶ ವ್ಯಕ್ತಪಡಿಸಿದ್ದು, ಇವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎ.ಎ.ಪಿ. ಮುಖಂಡ ವಿವೇಕಾನಂದ, ಮಂಗಳೂರಿನ ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ನಡೆದಿರುವುದರ ಘಟನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ತನಿಖೆ ನಡೆಸುವ ಸರಕಾರಿ ಇಲಾಖೆಗಳು ಮತ್ತು ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರವು ಪರಿಸ್ಥಿಯನ್ನು ನಿಭಾಯಿಸುವುದರಲ್ಲಿ ಸಂಪೂರ್ಣ ವಿಫಲವಾಗಿದೆ. ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್ ಅವರು ಮಕ್ಕಳ ಜೊತೆ ಕೂಡಿ ಶಾಲೆಗೆ ಮುತ್ತಿಗೆ ಹಾಕಿ ದ್ವೇಷ ಭಾವನೆ ತೋರಿಸಿರುವುದು ಮುಂದಿನ ಪೀಳಿಗೆಯ ಮನಸ್ಥಿತಿಯನ್ನು ಹಾಳುಗೆಡಗುವ ಪ್ರಯತ್ನವಾಗಿದೆ ಎಂದರು.
ಧಾರ್ಮಿಕ ಘೋಷಣೆಗಳನ್ನು ಮಕ್ಕಳಿಂದ ಕೂಗಿಸಿರುವುದು ಮತ್ತು ಮಂಗಳೂರು ಉತ್ತರದ ಶಾಸಕರಾದ ಭರತ್ ಶೆಟ್ಟಿಯವರು ತಾನು ಜನ ಪ್ರತಿನಿಧಿಯೆಂಬುವುದನ್ನು ಮರೆತು ಅಲ್ಪ ಸಂಖ್ಯಾತರಿಂದ ನಡೆಸಲ್ಪಡುವ ಶಾಲೆಗಳಿಗೆ ಪೋಷಕರು ಮಕ್ಕಳನ್ನು ಸೇರಿಸಬಾರದೆಂದು ಕರೆ ನೀಡಿರುತ್ತಾರೆ. ಈ ಶಾಸಕರ ನಡೆ ಸಂವಿಧಾನ ಮತ್ತು ಕಾನೂನಿಗೆ ವಿರುದ್ಧವಾಗಿದ್ದು ಪ್ರಸ್ತುತ ಕಾಂಗ್ರೆಸ್ ಸರಕಾರವು ಈ ಶಾಸಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳದೆ ಕಣ್ಣು ಮುಚ್ಚಿ ಕುಳಿತುಕೊಂಡಿರುವುದು ಅನುಮಾನಕ್ಕೆ ಎಡವುಮಾಡಿಕೊಟ್ಟಿದೆ. ಮತೀಯ ಭಾವನೆಯನ್ನು ಕೆರಳಿಸಿ ವೋಟ್ ಗಿಟ್ಟಿಸಿಕೊಳ್ಳುವ ತಂತ್ರ ಇದಾಗಿದೆ ಎಂದು ಕಿಡಿಕಾರಿದ್ದಾರೆ.